ಸಾರಾಂಶ
ದಿನ ಬೆಳಗಾದರೆ ಬಿಸಿಲಿನ ಶಾಖಕ್ಕೆ ಮೈಯೊಡ್ಡಿದ ಜನತೆ ಮಧ್ಯಾಹ್ನವಂತೂ ಬಿಸಿ ಗಾಳಿಗೆ ತತ್ತರಿಸಿ ಹೋಗಿದ್ದರು. ದಿನವಿಡಿ ಬಿಸಿಲಿನಿಂದ ಬೆಂದು ರಾತ್ರಿ ಹೊತ್ತು ಸಹ ಬಿಸಿಯ ಶಾಖದಿಂದ ನೆಮ್ಮದಿಯ ನಿದ್ದೆ ಮಾಡದ ಸ್ಥಿತಿ ಉಂಟಾಗಿತ್ತು.
ಧಾರವಾಡ:
ತೀವ್ರ ಬಿಸಿಲಿನ ತಾಪದಿಂದ ಕಾಯ್ದ ಹಂಚಿನಂತಾಗಿದ್ದ ಭುವಿಗೆ ಗುರುವಾರ ಮಧ್ಯಾಹ್ನ ಸುರಿದ ಮಳೆ ತಂಪಿನ ಲೇಪನ ಸವರಿತು. ಎರಡು ದಿನ ಬಿಸಿಲಿನ ಝಳದಿಂದ ಬೆವರಿದ್ದ ಧಾರವಾಡ ಜನತೆ ಒಂದು ಗಂಟೆಯ ಸುರಿದ ಉತ್ತಮ ಮಳೆಯು ಆಹ್ಲಾದಕರ ವಾತಾವರಣ ಸೃಷ್ಟಿಸಿತು.ದಿನ ಬೆಳಗಾದರೆ ಬಿಸಿಲಿನ ಶಾಖಕ್ಕೆ ಮೈಯೊಡ್ಡಿದ ಜನತೆ ಮಧ್ಯಾಹ್ನವಂತೂ ಬಿಸಿ ಗಾಳಿಗೆ ತತ್ತರಿಸಿ ಹೋಗಿದ್ದರು. ದಿನವಿಡಿ ಬಿಸಿಲಿನಿಂದ ಬೆಂದು ರಾತ್ರಿ ಹೊತ್ತು ಸಹ ಬಿಸಿಯ ಶಾಖದಿಂದ ನೆಮ್ಮದಿಯ ನಿದ್ದೆ ಮಾಡದ ಸ್ಥಿತಿ ಉಂಟಾಗಿತ್ತು. ಕೆಲವು ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆ ತುಸು ಸಮಾಧಾನದ ನಿದ್ದೆ ತರಿಸುತ್ತಿದೆ. ಗುರುವಾರ ಮಧ್ಯಾಹ್ನ 3ರ ನಂತರ ಒಂದು ಗಂಟೆ ಕಾಲ ಧಾರಾಕಾರವಾಗಿ ಸುರಿದ ಮಳೆ ಧಾರವಾಡ ಜನತೆ ನಮ್ಮದಿಯ ಉಸಿರು ಬಿಡುವಂತಾಯಿತು.
ಗುಡುಗು-ಮಿಂಚಿನ ಸದ್ದಿಲ್ಲದೇ ಜೋರಾಗಿ ಬಂದ ಮಳೆಗೆ ಏಕಾಏಕಿ ತಗ್ಗು ಪ್ರದೇಶಗಳು, ಚರಂಡಿಗಳು ತುಂಬಿ ಹರಿದವು. ರಸ್ತೆಗಳಂತೂ ನೀರಿನ ಹೊಂಡದಂತಾದವು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಅದೃಷ್ಟವಶಾತ್ ಯಾವುದೇ ಅನಾಹುತಗಳು ನಡೆದಿಲ್ಲ. ಮಳೆಯಿಂದಾಗಿ ಕರ್ನಾಟಕ ಕಾಲೇಜು ಮೈದಾನ ಸೇರಿದಂತೆ ಹಲವೆಡೆ ನೀರು ನಿಂತಿದೆ. ಬಿಸಿಲಿನ ಹೊಡೆತಕ್ಕೆ ಸಿಲುಕಿದ್ದ ನಾಯಿಗಳ ಗುಂಪೊಂದು ನೀರಿನಲ್ಲಿ ಆಟವಾಡಿದ್ದು ವಿಶೇಷ ಎನಿಸಿತು.ರೈತರು ಖುಷ್:
ಮಳೆಯ ಕೊರತೆಯಿಂದಾಗಿ ಕಳೆದ ಮುಂಗಾರು ಹಾಗೂ ಹಿಂಗಾರು ಹಂಗಾಮು ಕಳೆದುಕೊಂಡ ರೈತರೀಗ ಮಳೆಯಿಂದಾಗಿ ಖುಷಿಯಾಗಿದ್ದಾರೆ. ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದ್ದು, ಹೊಲಗಳನ್ನು ಹದಗೊಳಿಸಿ ಮುಂಗಾರು ಬಿತ್ತನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪೂರಕವಾಗಿ ಮಳೆಯಾಗುತ್ತಿದ್ದು ಅವರ ಮೊಗದಲ್ಲಿ ಮಂದಹಾಸ ಮೂಡಿದೆ. ಬರೀ ಧಾರವಾಡ ಮಾತ್ರವಲ್ಲದೇ ಸುತ್ತಲಿನ ಪ್ರದೇಶದಲ್ಲೂ ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ.