ಹುಲಿ ಸೆರೆಗೆ ಸಾಕಾನೆಯಿಂದ ಕೂಂಬಿಂಗ್

| Published : Aug 17 2025, 01:38 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹುಲಿಗಳ ಕಾದಾಟದಲ್ಲಿ ಪೆಟ್ಟು ತಿಂದ ಹುಲಿ ರಕ್ಷಿಸಿದ ಬೆನ್ನಲ್ಲೆ ಮತ್ತೊಂದು ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆ ಮೂಲಕ ಹಲವೆಡೆ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹುಲಿಗಳ ಕಾದಾಟದಲ್ಲಿ ಪೆಟ್ಟು ತಿಂದ ಹುಲಿ ರಕ್ಷಿಸಿದ ಬೆನ್ನಲ್ಲೆ ಮತ್ತೊಂದು ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆ ಮೂಲಕ ಹಲವೆಡೆ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದೆ. ಎಸಿಎಫ್‌ ಕೆ.ಸುರೇಶ್‌ ನೇತೃತ್ವದಲ್ಲಿ ಎರಡು ಸಾಕಾನೆಗಳೊಂದಿಗೆ ೫೦ ಮಂದಿ ಎಸ್‌ಟಿಪಿಎಫ್‌ ಹಾಗೂ ಅರಣ್ಯ ಸಿಬ್ಬಂದಿ ಸೇರಿ ಕುಳ್ಳನ ಮುಂಟಿ, ಹುಲಿ ಓಡಾಟದ ದಾರಿ, ಕಾಡಂಚಿನ ಪೊದೆಗಳಲ್ಲಿ ಕಾರ್ಯಾಚರಣೆ ನಡೆದಿದೆ.

ಕುಂದಕೆರೆ ವಲಯ ಅರಣ್ಯಾಧಿಕಾರಿ ಎಚ್.ಎನ್.ನಾಗೇಂದ್ರ ನಾಯಕ್‌ ಮಾತನಾಡಿ, ಹುಲಿ ಹೋದ ಹೊಸ ಹೆಜ್ಜೆ ಗುರುತುಗಳು ಸಿಕ್ಕಿಲ್ಲ. ಹೊಸ ಹೆಜ್ಜೆ ಗುರುತು ಪತ್ತೆ ಹಚ್ಚುವ ಜೊತೆಗೆ ಹುಲಿ ಹುಡಕಾಟದಲ್ಲಿ ಕಾರ್ಯಾಚರಣೆ ನಡೆದಿದೆ. ಹುಲಿಗಳ ಕಾದಾಟದಲ್ಲಿ ಒಂದು ಪೆಟ್ಟು ತಿಂದ ಹುಲಿ ಸಿಕ್ಕಿದೆ. ಮತ್ತೊಂದು ಹುಲಿ ಗಾಯಗೊಂಡಿದ್ದರೆ ಚಿಕಿತ್ಸೆ ಕೊಡಿಸುವ ಸಲುವಾಗಿ ಹುಲಿ ಸೆರೆ ಹಿಡಿಯಲು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಸಾಕಾನೆಗಳು ಹಾಗೂ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ಒಂದೆಡೆಯಾದರೆ ಹುಲಿ ಸಂಚರಿಸುವ ಕಾಡಿನೊಳಗೆ ಹಾಗೂ ಕಾಡಂಚಿನಲ್ಲೂ ಕ್ಯಾಮೆರಾ ಅಳವಡಿಸಲು ಸಹ ಅರಣ್ಯ ಇಲಾಖೆ ಮುಂದಾಗಿದೆ ಎಂದರು.ಸಕುಂದಕೆರೆ ವಲಯದಲ್ಲಿ ಹುಲಿಗಳ ಕಾದಾಟದಲ್ಲಿ ಪೆಟ್ಟು ತಿಂದ ಹುಲಿ ಗಂಡು ಹುಲಿಯಲ್ಲ, ಹೆಣ್ಣು ಹುಲಿ ಎಂದು ಚಿಕಿತ್ಸೆ ಬಳಿಕ ಗೊತ್ತಾಗಿದೆ. ಕಾದಾಟದಲ್ಲಿ ಹುಲಿ ಪೆಟ್ಟು ತಿಂದು ನಿತ್ರಾಣಗೊಂಡಿತ್ತು. ಹುಲಿ ಸಾಗಿಸುವ ಭರದಲ್ಲಿ ಹಾಗೂ ಹುಲಿಗೆ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಗಂಡೋ, ಹೆಣ್ಣೋ ಎಂದು ಪರೀಕ್ಷಿಸುವ ಮುನ್ನ ಗಂಡು ಹುಲಿ ಎಂದು ಹೇಳಲಾಗುತ್ತಿತ್ತು. ಆದರೆ ಅದು ಹೆಣ್ಣು ಹುಲಿಯಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ಪೆಟ್ಟು ತಿಂದ ಹುಲಿ ಚೇತರಿಸಿಕೊಳ್ಳುತ್ತಿದೆ ಎಂದು ಎಚ್.ಎನ್.ನಾಗೇಂದ್ರ ನಾಯಕ್‌ ಸ್ಪಷ್ಟಪಡಿಸಿದರು.