ಕೂಂಬಿಂಗ್‌ ಬಿಗಿಗೊಳಿಸಿದ ನಕ್ಸಲ್ ನಿಗ್ರಹದಳ

| Published : Nov 09 2024, 01:06 AM IST

ಸಾರಾಂಶ

ನಕ್ಸಲ್‌ ಚಟುವಟಿಕೆ ಸುದ್ದಿಯನ್ನು ನಕ್ಸಲ್ ನಿಗ್ರಹದಳ ಊಹಾಪೋಹವೆಂದು ತಿಳಿಸಿದೆ. ಶ್ವಾನದಳ ಹಾಗೂ ಡ್ರೋನ್‌ಗಳ ಮೂಲಕ ಮಾಹಿತಿ ಕಲೆ ಹಾಕಲಾಗಿದ್ದು, ಯಾವುದೇ ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿ ಸಿಕ್ಕಿಲ್ಲ.

ಬೊಳ್ಳೆಟ್ಟುವಿನಲ್ಲಿ ನಕ್ಸಲ್ ಚಟುವಟಿಕೆ ಶಂಕೆ ಹಿನ್ನೆಲೆ । ಇದು ಊಹಾಪೋಹವೆಂದ ಅಧಿಕಾರಿಗಳು

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಗಡಿ ಭಾಗವಾದ ಈದು ಸಮೀಪದ ಬೊಳ್ಳೆಟ್ಟು ಎಂಬಲ್ಲಿ ನಕ್ಸಲ್ ಚಟುವಟಿಕೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹದಳ ಕೂಂಬಿಂಗ್ ಕಾರ್ಯಾಚರಣೆ ಬಿಗಿಗೊಳಿಸಿದೆ.

ನಕ್ಸಲ್‌ ಚಟುವಟಿಕೆ ಸುದ್ದಿಯನ್ನು ನಕ್ಸಲ್ ನಿಗ್ರಹದಳ ಊಹಾಪೋಹವೆಂದು ತಿಳಿಸಿದೆ. ಶ್ವಾನದಳ ಹಾಗೂ ಡ್ರೋನ್‌ಗಳ ಮೂಲಕ ಮಾಹಿತಿ ಕಲೆ ಹಾಕಲಾಗಿದ್ದು, ಯಾವುದೇ ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿ ಸಿಕ್ಕಿಲ್ಲ. ಕಾಡಂಚಿನ ಭಾಗಗಳಲ್ಲಿ ವಾಸಿಸುವ ಕುಟುಂಬಗಳಿಂದಲೂ ಮಾಹಿತಿ ಕಲೆಹಾಕಲಾಗಿದ್ದು, ನಕ್ಸಲ್‌ ಇರುವಿಕೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

ಈಗಾಗಲೇ ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನ ಪೊಲೀಸರು, ಎಎನ್‌ಎಫ್ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತಿದ್ದಾರೆ. ಸಾರ್ವಜನಿಕರು ಆತಂಕ ಪಡುವುದು ಬೇಡ ಎಂದು ಎಎನ್‌ಎಫ್ ತಿಳಿಸಿದೆ.

ಕಾಡುತ್ಪತ್ತಿ ಸಂಗ್ರಹಕರು ಗುಲ್ಲೆಬ್ಬಿಸಿದರೇ?:

ಈ ಪ್ರದೇಶ ಪಶ್ಚಿಮ ಘಟ್ಟಗಳ ಸಾಲಿನ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವುದರಿಂದ ಸಾರ್ವಜನಿಕರು ಅತಿಕ್ರಮಣ ಮಾಡುವಂತಿಲ್ಲ. ಆದರೆ ನವೆಂಬರ್, ಡಿಸೆಂಬರ್‌ನಲ್ಲಿ ರಾಮಪತ್ರೆ ಕಾಯಿ ಕೊಯ್ಯುವ ಋತುವಾಗಿದೆ. ರಾಮಪತ್ರೆ ಔಷಧೀಯ ಗುಣಗಳನ್ನು ಹೊಂದಿರುವ ಕಾಯಿಯಾಗಿದ್ದು, ಬಲು ಬೇಡಿಕೆಹೊಂದಿದೆ. ಇದನ್ನು ಕೊಯ್ಯಲೆಂದು ಹೊರಗಿನವರೂ ಅಲ್ಲಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ಭಾಗಗಳ ಜನರು ನಕ್ಸಲ್ ಚಟುವಟಿಕೆಗಳ ಗುಲ್ಲೆಬ್ಬಿಸಿ ಕಾಡುತ್ಪತ್ತಿ ಸಂಗ್ರಹಿಸಿರಬಹುದು. ಇಲ್ಲದಿದ್ದರೆ ಕಾಡು ಪ್ರಾಣಿಗಳ ಬೇಟೆಯಾಡಲು ಶಿಕಾರಿಗೆ ತೆರಳಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.

* ನಕ್ಸಲ್ ಎನ್‌ಕೌಂಟರ್ ಮಾಸದ ನೆನಪು:

ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ 2003ರಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್ ಸ್ಥಳೀಯರ ಮನಸ್ಸಿಂದ ಇನ್ನೂ ಮಾಸಿಲ್ಲ, ನಕ್ಸಲ್ ಚಟುವಟಿಕೆ ಹೆಸರು ಕೇಳಿದಾಗಲೇ ಜನರಲ್ಲಿ ಭೀತಿ ಉಂಟಾಗಿದೆ. 2003 ನವೆಂಬರ್‌ 17ರಂದು 5 ಜನ ಇದ್ದ ನಕ್ಸಲರ ತಂಡ ರಾಮಪ್ಪ ಪೂಜಾರಿ ಮನೆಯಲ್ಲಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿದ್ದು, ಅದರಲ್ಲಿ ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋದಾ ಎಂಬಾಕೆ ಗಾಯಗೊಂಡಿದ್ದರು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು. ಎನ್‌ಕೌಂಟರ್ ನಡೆದಿದ್ದ ವೇಳೆ ಗಾಯಾಳು ನಕ್ಸಲರು ಓಡಿಹೋದ ಸಂದರ್ಭ ರಕ್ತ ಚೆಲ್ಲಿದ ಗುರುತುಗಳು ಎಲ್ಲೆಲ್ಲೂ ತೋಟದ ನಡುವೆ ಕಾಣಿಸಿತ್ತು.

* ಅಭಿವೃದ್ಧಿ ಹೊಂದದ ಗ್ರಾಮ:

ಬೊಳ್ಳೆಟ್ಟು ಈದು ಗ್ರಾಮದಲ್ಲಿದ್ದರೂ ದ್ವೀಪ ಪ್ರದೇಶವಾಗಿದೆ. ಈ ಪ್ರದೇಶ ಸುವರ್ಣ ನದಿಯಿಂದ ಸುತ್ತುವರಿದಿದೆ. ಇಲ್ಲಿಗೆ ಹೋಗಲು ನದಿಗೆ ಅಡ್ಡಗಾಲಾಗಿ ಒಂದು ಕಾಲುಸಂಕ ಮಾತ್ರ ಇದೆ. ನಾರಾವಿ ಮೂಲಕ 2.5 ಕಿ.ಮೀ. ನಡೆದುಕೊಂಡೇ ಬೊಳ್ಳೆಟ್ಟು ತಲುಪಬೇಕಾದ ಸ್ಥಿತಿ ಇದೆ. ಮಳೆಗಾಲ ಬಂತೆಂದರೆ ಈ ಗ್ರಾಮಕ್ಕೆ ಶಾಪವಿದ್ದಂತೆ. ಮಳೆ ಬಂದರೆ ಗ್ರಾಮಕ್ಕೆ ಸಂಪರ್ಕ ಸಾಧ್ಯವಿಲ್ಲ. ಈ ಸಂದರ್ಭ ಇಲ್ಲಿನ ಜನರು ಜಲದಿಗ್ಬಂಧನದಲ್ಲಿರುತ್ತಾರೆ.