ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಸದೃಢತೆಗೆ ಬೆನ್ನೆಲುಬಾಗಿರುವ ಹೈನುಗಾರಿಕೆ ಉದ್ಯಮ, ಹಾಲು ಉತ್ಪಾದಕ ಸಹಕಾರ ಸಂಘದ ನೋಂದಣಿಗೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳ ವಿರೋಧದಿಂದ ಅಡಚಣೆಯಾಗುತ್ತಿದ್ದು ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘ ನೋಂದಣಿಗೆ ಸಹಕಾರ ನೀಡಬೇಕು ಎಂದು ತುಮಕೂರು ಹಾಲು ಉತ್ಪಾದಕ ಸಹಕಾರ ಒಕ್ಕೂಟದ ಸದಸ್ಯರು ಹಲವು ರೈತರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹತ್ತಿರ ಮೊರೆ ಹೋಗಿರುವ ಘಟನೆ ಜರುಗಿದೆ.ತಾಲೂಕಿನ ಕೋಳಾಲ ಹೋಬಳಿ ಮಲುಗೋನಹಳ್ಳಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೋಂದಣಿ ಹಂತದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಕೇವಲ ನಾಲ್ಕೈದು ಮಂದಿ ಉಪಕೇಂದ್ರ ನೆಡೆಸುತ್ತಿರುವ ವ್ಯಕ್ತಿಗಳ ವಿರೋಧದಿಂದ ನೋಂದಣಿ ಹಂತದಲ್ಲಿದ್ದ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಡಚಣೆ ಆಗುತ್ತಿದೆ. ನೂರಾರು ಜನ ರೈತರ ಹಿತಾಸಕ್ತಿ ಮನಗಂಡು ಹಾಲು ಉತ್ಪಾದಕ ಸಹಕಾರ ಸಂಘದ ನೋಂದಣಿಗೆ ಸಂಬಂಧಪಟ್ಟ ಇಲಾಖೆ ಸಹಕರಿಸಬೇಕು, ಪಟಭದ್ರ ಹಿತಾಸಕ್ತಿಗಳ ಕೆಲವು ಇಲ್ಲಸಲ್ಲದ ಆರೋಪಗಳಿಗೆ ಗಮನಕೊಡದೆ ರೈತರ ಹಿತ ಕಾಪಾಡಿ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ನೋಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ರೈತರು ಸಂಬಂಧಪಟ್ಟ ಇಲಾಖೆ ಹಾಗೂ ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.
ಮಲುಗೋನಹಳ್ಳಿ ಗ್ರಾಮದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಹಾಲು ಅಳಸಿಕೊಳ್ಳುವ ವ್ಯಕ್ತಿಯೋರ್ವ ರೈತರಿಗೆ ಅನಾವಶ್ಯಕವಾಗಿ ಡಿಗ್ರಿ ಬರುತ್ತಿಲ್ಲ ಎಂದು ನೆಪವೂಡ್ಡಿ, ಕೆಲವೊಂದು ರೈತರ ಹಾಲನ್ನ ವಾಪಸ್ ಕಳಿಸುತ್ತಿದ್ದರು. ಈ ಕಾರಣದಿಮದ ಕೆಲವು ರೈತರು ತಾವೇ ಸರ್ಕಾರದಿಂದ ಸರ್ಕಾರಿ ಡೈರಿಯೊಂದನ್ನ ಪ್ರಾರಂಭಿಸೋಣ ಎಂದುಕೊಂಡು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಈಶ್ವರಪ್ಪನವರ ಬಳಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ 2023 ಅಕ್ಟೋಬರ್ ತಿಂಗಳಲ್ಲಿ ಹೊಸ ಹಾಲು ಉತ್ಪಾದಕ ಸಹಕಾರ ಸಂಘ ಉಪಕೇಂದ್ರಕ್ಕೆ ಅವಕಾಶ ಕಲ್ಪಿಸಿಕೊಟ್ಟು ರೈತರು ನೆಮ್ಮದಿಯಿಂದ ಹಾಲು ಹಾಕುತ್ತಿರುವ ಸಂದರ್ಭದಲ್ಲಿ ಈಗ ನೋಂದಣಿಯ ಹಂತ ಬಂದ ಸಂದರ್ಭದಲ್ಲಿ ಹಿಂದೆ ಹಾಲು ಕಳೆದುಕೊಳ್ಳುತ್ತಿದ್ದಂತಹ ವ್ಯಕ್ತಿ ಅವರ ಹಿಂಬಾಲಕ ಕೆಲವು ಬೆರಳೆಣಿಕೆಯಷ್ಟು ಜನ ಸರ್ಕಾರಿ ಹಾಲು ಉತ್ಪಾದಕ ಸಹಕಾರ ಸಂಘದ ನೋಂದಣಿಯಾಗದ ರೀತಿಯಲ್ಲಿ ಅಡಚಣೆ ಮಾಡುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಮಲಗೋನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘ ಉಪ ಕೇಂದ್ರ 2023ರ ಅಕ್ಟೋಬರ್ ಮಹೆಯಲ್ಲಿ ಪ್ರಾರಂಭಿಸಿ ಉಪ ಕೇಂದ್ರ ಪ್ರಾರಂಭವಾದ 6 ತಿಂಗಳ ಒಳಗಡೆ ಸಂಘವನ್ನು ನೋಂದಣಿ ಮಾಡಿಸಿಕೊಳ್ಳಲು ಉಪ ಕೇಂದ್ರಕ್ಕೆ ಹಾಲು ಒಕ್ಕೂಟದಿಂದ ಮಾರ್ಗದರ್ಶನ ನೀಡಿದ್ದು, ಅದೇ ಮಾದರಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ನೊಂದಣಿಗೆ ಹಾಲು ಒಕ್ಕೂಟದ ಕಡೆಯಿಂದ ಇದೇ ತಿಂಗಳು ಫೆಬ್ರವರಿ 14ರಂದು ಗ್ರಾಮ ಸಭೆ ನಡೆಸಿ ನೋಂದಣಿ ಮಾಡಲು ಅಧಿಕಾರಿಗಳು ಬಂದ ಸಂದರ್ಭದಲ್ಲಿ ಉಪ ಕೇಂದ್ರ ನಡೆಸುತ್ತಿರುವ ಡೈರಿಯ ಕೆಲವು ವ್ಯಕ್ತಿಗಳು ಸರ್ಕಾರಿ ಡೈರಿ ಪ್ರಾರಂಭಿಸಬಾರದು ಎಂಬ ದುರುದೇಶದಿಂದ ಸಭೆ ನಡೆಯುವ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಗಲಾಟೆ ಮಾಡಿ ಹಾಲು ಉತ್ಪಾದಕ ಸಹಕಾರ ಸಂಘದ ಪ್ರಾರಂಭವಾದಂತೆ ಕುತಂತ್ರ ನಡೆಸುತ್ತಿದ್ದಾರೆ.
ಆದ್ದರಿಂದ ಕೂಡಲೇ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘ ಉಪ ಕೇಂದ್ರ ನೊಂದಣಿಗೆ ಅವಕಾಶ ಕಲ್ಪಿಸುವಂತೆ ಗೃಹಸಚಿವ ಡಾ.ಜಿ. ಪರಮೇಶ್ವವರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.