ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಾವೆಲ್ಲರೂ ಸಮಾಜದಲ್ಲಿ ನೆಮ್ಮದಿ ಬದುಕನ್ನು ಕಂಡುಕೊಂಡಿದ್ದೇವೆಂದರೆ ಅದು ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಸಹಕಾರದಿಂದ. ಸಮಾಜದಲ್ಲಿ ಕಾನೂನು ವ್ಯಾಪ್ತಿ ಮೀರಿ ನಡೆದರೆ ಅಂತಹವರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡರೆ ನ್ಯಾಯಾಂಗ ಇಲಾಖೆ ಅವರಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಜನ ನೆಮ್ಮದಿಯ ಬದುಕಿಗೆ ನಾಂದಿಯಾಡಿವೆ ಎಂದು ಸಿವಿಲ್ ನ್ಯಾಯಾಲಯ ಹಿರಿಯ ನ್ಯಾಯಧೀಶ ಸಮೀರ್ ಪಿ.ನಂದ್ಯಾಲ್ ತಿಳಿಸಿದರು.ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ನಮ್ಮ ನಡೆ ಜಾಗೃತಿ ಕಡೆ, ಮನೆ, ಮನೆಗೆ ಪೊಲೀಸ್ ಹಾಗೂ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು, ಬುದ್ಧಿವಂತರು ಆನ್‌ಲೈನ್ ಮೂಲಕ ಹಣ ಕಳೆದುಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಸಮಾಜದಲ್ಲಿ ನಡೆಯುವ ಅಪರಾಧವೂ ಸೇರಿದಂತೆ ಎಲ್ಲವನ್ನೂ ನಿಯಂತ್ರಿಸಿ ಜಾಗೃತ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಸಾರ್ವಜನಿಕರು ಸಹ ಸಕಾಲದಲ್ಲಿ ಪೊಲೀಸ್ ಇಲಾಖೆಗೆ ಸಹಕಾರ, ಮಾಹಿತಿ ನೀಡಿದರೆ ಅಪರಾಧ ಪ್ರಕರಣವಲ್ಲದೆ, ಅಶಾಂತಿ ಉಂಟು ಮಾಡುವ ಪ್ರಕರಣವನ್ನೂ ಸಹ ನಿಯಂತ್ರಿಸುತ್ತಾರೆ. ಯಾವುದೇ ಸಂದರ್ಭದಲ್ಲಾಗಲಿ ನಾವು ಚಿಂತಿಸದೆ ಸಮಾಜಕ್ಕೆ ಮಾರಕವಾಗುವ ಯಾವುದೇ ವಿಚಾರಗಳಿಗೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಪೊಲೀಸ್ ಇಲಾಖೆ ನಮ್ಮೆಲ್ಲರ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶ ಎಲ್ಲರಿಗೂ ಮನದಟ್ಟಾಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಚಳ್ಳಕೆರೆ ವೃತ್ತ ಹಾಗೂ ತಳಕು ವೃತ್ತ ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಣದ ಜತೆಗೆ ಜನರ ಸಮಸ್ಯೆಗೆ ಪೊಲೀಸ್ ಇಲಾಖೆ ನಿರಂತರವಾಗಿ ಸ್ಪಂದಿಸಿ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯಮೂಡುವಂತೆ ಮಾಡುವ ಕಾರ್ಯನಿರಂತರವಾಗಿ ನಡೆಯಲಿ ಎಂದರು.ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ಮಾತನಾಡಿ, ಅಪರಾಧಗಳ ನಿಯಂತ್ರಣದ ಜತೆಗೆ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕಿದೆ. ಸಂವಿಧಾನ ರೂಪಿಸಿದ ಪ್ರತಿಯೊಂದು ಕಾನೂನಿನಲ್ಲೂ ಸಾರ್ವಜನಿಕರಿಗೆ ಅವಶ್ಯಕವಾಗಿ ಬೇಕಾದ ಅಂಶಗಳು ಅಡಗಿವೆ. ಬಾಲ್ಯವಿವಾಹ, ಕಳ್ಳತನ, ಕೊಲೆ ಮುಂತಾದ ಪ್ರಕರಣಗಳ ನಿಯಂತ್ರಿಸಲು ಕಾನೂನು ಶಕ್ತವಾಗಿದೆ. ಎಲ್ಲರೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ವಿಭಾಗದ ಡಿವೈಎಸ್‌ಪಿ ಟಿ.ಬಿ.ರಾಜಣ್ಣ, ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಮಧ್ಯೆ ವಿಶ್ವಾಸಾರ್ಹತೆ ಹೆಚ್ಚಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಉಪಯುಕ್ತವಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಸರ್ವಶಕ್ತವಾಗಿದೆ. ಸಾರ್ವಜನಿಕರು ಸಹ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಆಯೋಜಿಸಿದೆ. ಜನರು ಸಹಕರಿಸಿದರೆ ಮಾತ್ರ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಬಿ.ಆರ್.ಪುನೀತ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಡಿಆರ್ ಡಿವೈಎಸ್ಪಿ ಶ್ರೀನಿವಾಸ್, ಚಳ್ಳಕೆರೆ ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್, ತಳಕು ವೃತ್ತ ನಿರೀಕ್ಷಕ ಹನುಮಂತಪ್ಪಸಿರಿಹಳ್ಳಿ, ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಎನ್.ವೆಂಕಟೇಶ್, ಪಿಎಸ್‌ಐಗಳಾದ ಜೆ.ಶಿವರಾಜ್, ಈರೇಶ್, ಧರೆಪ್ಪ ಬಾಳಪ್ಪ ದೊಡ್ಡಮನಿ, ಮಾರುತಿ, ಶಿವರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.