ಸಾರಾಂಶ
ದೊಡ್ಡಬಳ್ಳಾಪುರ: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ನಮ್ಮ ಸಮೀಕ್ಷೆ ನಮ್ಮ ಜವಬ್ದಾರಿ ಎಂಬ ಮನೆ ಮನೆ ಸಮೀಕ್ಷೆ ಸೆ.22ರಿಂದ ಅ.7ರವರೆಗೆ ನಡೆಯಲಿದ್ದು ಈ ಸಮೀಕ್ಷೆಗೆ ಜನರು ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ಬೆಂ.ಗ್ರಾ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆಯಲಿರುವ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕುರಿತು ಜಿಲ್ಲೆಯ ಸಮುದಾಯ ಮುಖಂಡರು ಮತ್ತು ಗ್ರಾಪಂ ಅಧ್ಯಕ್ಷರಿಗೆ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷಾದಾರರು ಸಮೀಕ್ಷೆ ಮಾಡುವುದರಿಂದ ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ನೀವು ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆದಾರ್ ಕಾರ್ಡಿನ ಸಂಖ್ಯೆ ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿದ್ದರೆ ಸಮೀಕ್ಷೆ ಸುಲಭವಾಗುತ್ತದೆ ಮತ್ತು ವೇಗವಾಗುತ್ತದೆ. ಜೊತೆಗೆ ಕುಟುಂಬದ ಎಲ್ಲಾ ಸದಸ್ಯರಗಳ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುವುದರಿಂದ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂಬುದನ್ನು ಖಚಿತ ತಪಡಿಸಿಕೊಳ್ಳಿ ಎಂದರು.
ಸಮೀಕ್ಷೆ ಸಂಧರ್ಭದಲ್ಲಿ ಅವರ ಮನೆಯಲ್ಲಿ ಇಲ್ಲದಿದ್ದರೆ ಆ ಸಂಧರ್ಭದಲ್ಲಿ ಮನೆಯಲ್ಲಿ ಇರುವ ಸದಸ್ಯರು ಮನೆಯಲ್ಲಿ ಇಲ್ಲದಿರುವ ಸದಸ್ಯರಿಗೆ ಫೋನ್ ಮಾಡಿ ಒಟಿಪಿ ಪಡೆದು ಮಾಹಿತಿ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಇದ್ದು ಲಿಂಕ್ ಆಗಿರುವ ಮೊಬೈಲ್ ಫೋನ್ ನಂಬರ್ ಇಲ್ಲದಿದ್ದರೆ ಹತ್ತಿರದ ಆಧಾರ್ ಎನ್ರೊಲ್ ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಈಗ ಬಳಸುತ್ತಿರುವ ಮೊಬೈಲ್ ನಂಬರ್ ಗೆ ಲಿಂಕ್ ಮಾಡಿಸಿಕೊಳ್ಳಿ.ಮಾಹಿತಿ ಅಗತ್ಯವಿದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಕರೆ ಮಾಡಿ ಅಥವಾ ವೆಬ್ಸೈಟ್ https://kscbc.karnataka.gov.in ಮೂಲಕ ಮಾಹಿತಿ ಪಡೆಯಬಹುದು ಎಂದು ಹೇಳಿದರು.ಜಿಪಂ ಸಿಇಒ ಡಾ ಕೆ.ಎನ್.ಅನುರಾಧ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ ನೀತಿ ನಿರೂಪಣೆಯನ್ನು ಕೈಗೊಳ್ಳುಲು ಆಧಾರವಾಗಿರುತ್ತದೆ. ಸಮೀಕ್ಷೆ ಕಾರ್ಯವೂ ಸೇವೆಯ ಒಂದು ಭಾಗವಾಗಿದೆ. ಈ ಕಾರ್ಯವನ್ನು ಅನುಷ್ಟಾನವಾಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿ ಎಂದರು.
ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ವಿಷಯಗಳು ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೂ ಕುಟುಂಬದ ಸದಸ್ಯರು ಸರಿಯಾದ ಮಾಹಿತಿ ನೀಡಬೇಕು ಎಂದರು.ಕಾರ್ಯಾಗಾರದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಜಯ ಶ್ರೀ ಯಂಡೆಗಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮಾ, ಸಾಂಖ್ಯಿಕ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀ ಕಾಂತ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಮತ್ತು ಸಮುದಾಯ ಮುಖಂಡರು ಉಪಸ್ಥಿತರಿದ್ದರು.
15ಕೆಡಿಬಿಪಿ3-ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕುರಿತು ಜಿಲ್ಲೆಯ ಸಮುದಾಯ ಮುಖಂಡರು ಮತ್ತು ಗ್ರಾಪಂ ಅಧ್ಯಕ್ಷರಿಗೆ ಅರಿವು ಕಾರ್ಯಾಗಾರ ನಡೆಯಿತು.