ನಾಳೆ ಕುಕನೂರಲ್ಲಿ ಸಹಕಾರ ಜಾಗೃತಿ ಸಮಾವೇಶ: ಆನಂದ ಉಳ್ಳಾಗಡ್ಡಿ

| Published : Feb 06 2025, 11:49 PM IST

ನಾಳೆ ಕುಕನೂರಲ್ಲಿ ಸಹಕಾರ ಜಾಗೃತಿ ಸಮಾವೇಶ: ಆನಂದ ಉಳ್ಳಾಗಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.೮ರಂದು ಕುಕನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಹಕಾರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಫೆ.೮ರಂದು ಕುಕನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಹಕಾರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆನಂದ ಉಳ್ಳಾಗಡ್ಡಿ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಆರ್ಥಿಕವಾಗಿ ಬಲವರ್ಧನೆಯಾಗಬೇಕು. ಸಾಮಾನ್ಯ ವ್ಯಕ್ತಿಗೂ ಸಹಕಾರ ಕ್ಷೇತ್ರದ ಸೌಲಭ್ಯಗಳು ವಿಳಂಬವಿಲ್ಲದೇ ದೊರೆಯಬೇಕು, ಸಹಕಾರಿ ಸಂಘಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಲವಾದ ಉದ್ದೇಶ ಇಟ್ಟುಕೊಂಡು ಶಾಸಕ ಬಸವರಾಜ ರಾಯರೆಡ್ಡಿಯವರು ಸಮಾವೇಶ ಆಯೋಜನೆ ಮಾಡಿದ್ದಾರೆ.

ಸಮಾವೇಶದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ನಿರ್ಣಯ ಜಾರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗುವುದು. ಸಮಾವೇಶದಲ್ಲಿ ಕೈಗೊಂಡ ಕೆಲ ಮಹತ್ವದ ನಿರ್ಣಯಗಳು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಂಡನೆ ಮಾಡುವ ಬಜೆಟ್‌ನಲ್ಲಿ ಸೇರ್ಪಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲ ಮಹತ್ವದ ನಿರ್ಣಯಗಳು ಇಡೀ ರಾಜ್ಯಕ್ಕೆ ಅನ್ವಯವಾಗುವ ಸಾಧ್ಯತೆಗಳಿವೆ. ಶಾಸಕ ಬಸವರಾಜ ರಾಯರೆಡ್ಡಿಯವರು ಈ ಭಾರೀ ಸಹಕಾರ ಕ್ಷೇತ್ರದ ಕಡೆ ಗಮನ ಹರಿಸಿದ್ದು ಬದಲಾವಣೆಯ ನಿರೀಕ್ಷೆ ಗರಿಗೆದರಿದ್ದು, ಈ ಮೂಲಕ ಕ್ಷೇತ್ರದಲ್ಲಿರುವ ಸಹಕಾರ ಸಂಘಗಳ ಬಲವರ್ಧನೆಗೆ ಮುಹೂರ್ತ ಕೂಡಿ ಬಂದಂತಾಗಿದೆ ಎಂದು ಹೇಳಿದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಮಾವೇಶ ಉದ್ಘಾಟಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ಸಹಕಾರ ವಾರಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ಸಹಕಾರಿ ಪಿತಾಮಹ ಸಿದ್ದನಗೌಡ ರಾಮನಗೌಡ ಪಾಟೀಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ೫೦೦೦ಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯ ಶಾಸಕರು, ಸಂಸದರು, ಸಹಕಾರಿ ಕ್ಷೇತ್ರದ ಹಿರಿಯ ಅಧಿಕಾರಿಗಳು ಸಮಾವೇಶದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.