Cooperation between organizations is necessary to strengthen government schools

ಕನ್ನಡಪ್ರಭ ವಾರ್ತೆ ಚಳ್ಳಕೆರೆಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಮಕ್ಕಳ ಗುಣಾತ್ಮಕ ಕಲಿಕೆಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ದಾನಿಗಳ ನೆರವು ಅಗತ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ನನ್ನಿವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಆರ್. ಮಾರುತೇಶ ತಿಳಿಸಿದರು.

ಬೆಂಗಳೂರಿನ ಸ್ನೇಹಿತರ ಬಳಗ ಹಾಗೂ ವಿವಿಧ ಟ್ರಸ್ಟ್ ಗಳ ನೆರವಿನಿಂದ ನನ್ನಿವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಹಾಗೂ ಶಾಲಾ ಬ್ಯಾಗ್ ಸ್ಟೀಲ್ ವಾಟರ್ ಬಾಟಲ್, ಪೆನ್ನು, ಪೆನ್ಸಿಲ್ ಇನ್ನಿತರ ಲೇಖನ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.

ವಿದ್ಯೆಯೇ ಜೀವನದ ನಿಜವಾದ ಸಂಪತ್ತು ಎಂಬ ಮಾತಿನಂತೆ ನಾವು ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ಉತ್ತಮ ಶಿಕ್ಷಣ. ಹಣ, ಆಸ್ತಿ, ಅಧಿಕಾರ ಎಲ್ಲವೂ ಒಂದು ದಿನ ಕಡಿಮೆಯಾಗಬಹುದು. ಆದರೆ ಗಳಿಸಿದ ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಗುವೂ ಉತ್ತಮ ಶಿಕ್ಷಣವನ್ನು ಪಡೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಬೇಕು.

ಇದೀಗ ವಿತರಿಸಲಾಗುತ್ತಿರುವ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಮುಂತಾದ ಸಾಮಗ್ರಿಗಳು ಕೇವಲ ವಸ್ತುಗಳಲ್ಲ. ಇವು ಮಕ್ಕಳ ಕನಸುಗಳನ್ನು ಬರೆಯುವ ಸಾಧನಗಳು, ಅವರ ಭವಿಷ್ಯವನ್ನು ರೂಪಿಸುವ ಸಹಾಯಕಗಳು. ಒಂದು ಸಣ್ಣ ಪೆನ್ನಿನಿಂದ ಬರೆಯಲ್ಪಡುವ ಅಕ್ಷರವೇ ಮುಂದೊಂದು ದಿನ ವೈದ್ಯ, ಶಿಕ್ಷಕ, ವಿಜ್ಞಾನಿ, ಅಧಿಕಾರಿ ಅಥವಾ ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯ ಜೀವನದ ಆರಂಭವಾಗಬಹುದು ಎಂದು ಹೇಳಿದರು.

ಈ ಸಾಮಗ್ರಿಗಳನ್ನು ಗೌರವದಿಂದ ಬಳಸಿ. ಪ್ರತಿದಿನ ಶಾಲೆಗೆ ಬನ್ನಿ, ಶಿಕ್ಷಕರು ಹೇಳುವುದನ್ನು ಗಮನವಿಟ್ಟು ಕಲಿಯಿರಿ, ಚೆನ್ನಾಗಿ ಓದಿ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಓದುವುದು ಕೇವಲ ಅಂಕಗಳಿಗಾಗಿ ಅಲ್ಲ, ಉತ್ತಮ ಮನುಷ್ಯರಾಗುವುದಕ್ಕಾಗಿಯೂ ಆಗಿದೆ.

ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರ ಬಹಳ ಮಹತ್ವದ್ದು. ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವುದು, ಅವರ ಓದಿನ ಬಗ್ಗೆ ಗಮನ ಕೊಡುವುದು, ಶಿಕ್ಷಕರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮಕ್ಕಳಿಗೆ ಆಸ್ತಿ ಕೊಡುವುದಕ್ಕಿಂತ ಶಿಕ್ಷಣ ಕೊಡುವುದು ಶ್ರೇಷ್ಠ ಎಂಬ ಮಾತನ್ನು ನಾವು ನೆನಪಿಟ್ಟುಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದ ಮಗು ತನ್ನ ಕುಟುಂಬದಷ್ಟೇ ಅಲ್ಲ. ಸಮಾಜ ಮತ್ತು ದೇಶದ ಅಭಿವೃದ್ಧಿಗೂ ಕೊಡುಗೆ ನೀಡುತ್ತದೆ.

ದಾನ ಎಂದರೆ ಹಣ ನೀಡುವುದಲ್ಲ;

ನಮ್ಮಿಂದ ಸಾಧ್ಯವಾದ ಸಹಾಯವನ್ನು ಅಗತ್ಯವಿರುವವರಿಗೆ ಪ್ರೀತಿಯಿಂದ ನೀಡುವುದು. ಹಸಿದವರಿಗೆ ಅನ್ನ, ರೋಗಿಗಳಿಗೆ ಔಷಧಿ, ಬಡವರಿಗೆ ಬಟ್ಟೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ಸಹಾಯ ನೀಡುವುದು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ಎಸ್.ಡಿ.ಎಮ್.ಸಿ. ಅಧ್ಯಕ್ಷೆ ರೇಖಾ ಮಾತನಾಡಿ ಶಾಲೆಯ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಎಲ್ಲಾ ಸಹೃದಯಿ ವ್ಯಕ್ತಿಗಳಿಗೆ ಕೊಡುಗೈ ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ದೇವೆಂದ್ರಪ್ಪ,ಸಿ.ಆರ್.ಪಿ. ಈಶ್ವರಪ್ಪ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸತೀಶ್, ಸದಸ್ಯರಾದ ಪವಿತ್ರ,ಆಶಾ, ನಾಗಮ್ಮ ವಿರೇಶ್ ,ರಾಜಶೇಖರ್ ಮುಖಂಡರಾದ ರಾಜಣ್ಣ, ಶಿವಣ್ಣ, ಮಧುಸೂದನ ಮಾತನಾಡಿದರು.

ಶಿಕ್ಷಕರಾದ ಕರಿಬಸಮ್ಮ, ಜಯಮ್ಮ, ಯರ್ರಯ್ಯ, ಅಮೋಘೇಶ, ಮೇಘ, ಉಮಾದೇವಿ, ಹನುಮಂತಪ್ಪ, ರಾಧ, ಕೊಂದಂಡರಾಮಸ್ವಾಮಿ, ಮಂಜಣ್ಣ ಇನ್ನಿತರರು ಹಾಜರಿದ್ದರು. ಪೋಟೋ: ಚಳ್ಳಕೆರೆ ತಾಲೂಕಿನ ನನ್ನಿವಾಳ ಸರ್ಕಾರಿ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಸ್ನೇಹಿತರ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳ ಕಿಟ್ ವಿತರಣೆಯನ್ನು ಮಂಗಳವಾರ ಮುಖ್ಯ ಶಿಕ್ಷಕ ಮಾರುತೇಶ್ ವಿತರಿಸಿದರು.