ಪುತಿನ ಓದಿದ ಸರ್ಕಾರಿ ಶಾಲೆ ಬಲವರ್ಧನೆಗೆ ಸಹಕಾರ: ಪ್ರೊ.ಕೃಷ್ಣೇಗೌಡ ಭರವಸೆ

| Published : Jan 18 2025, 12:47 AM IST

ಪುತಿನ ಓದಿದ ಸರ್ಕಾರಿ ಶಾಲೆ ಬಲವರ್ಧನೆಗೆ ಸಹಕಾರ: ಪ್ರೊ.ಕೃಷ್ಣೇಗೌಡ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತಿನ ವ್ಯಾಸಂಗ ಮಾಡಿದ ಶಾಲೆ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ನಡೆಯಬೇಕು. ಹೀಗಾಗಿ ಈ ವರ್ಷ ಪುತಿನ ಕಲಾಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ನಡೆಸಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಬೇಕು. ಇದಕ್ಕೆ ಟ್ರಸ್ಟ್ ಸಹಕಾರ ನೀಡುತ್ತದೆ. ನಾವೆಲ್ಲರೂ ನಿಮ್ಮೊಡನೆ ವಾರ್ಷಿಕೋತ್ಸವದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಸರ್ಕಾರಿ ಶಾಲೆ ಬಲವರ್ಧನೆಗೆ ಟ್ರಸ್ಟ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಪುತಿನ ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ತಿಳಿಸಿದರು.

ಮೇಲುಕೋಟೆಯ ಕವಿ ಪುತಿನ ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿದ ಅವರು, ಶಾಲೆಯ ಪರಿಸರ ಉತ್ತಮವಾಗಿದೆ. ಪ್ರತಿಭಾವಂತ ಶಿಕ್ಷಕರಿದ್ದರೂ ಶಾಲೆಯಲ್ಲಿ ಮಕ್ಕಳ ಕೊರತೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಮಕ್ಕಳ ದಾಖಲಾತಿಗೆ ಶ್ರಮಿಸೋಣ. ಮಕ್ಕಳಲ್ಲಿ ಭಾಷಾ ಬೆಳವಣಿಗೆಗೆ ಪೂರಕವಾದ ಎಲ್ಲಾ ಚಟುವಟಿಕೆ ಹಮ್ಮಿಕೊಂಡು ಶಾಲಾಭಿವೃದ್ಧಿ ಮಾಡಿ ಸರ್ಕಾರದ ವತಿಯಿಂದ ಶಾಲೆಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಪುತಿನ ವ್ಯಾಸಂಗ ಮಾಡಿದ ಶಾಲೆ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ನಡೆಯಬೇಕು. ಹೀಗಾಗಿ ಈ ವರ್ಷ ಪುತಿನ ಕಲಾಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ನಡೆಸಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಬೇಕು. ಇದಕ್ಕೆ ಟ್ರಸ್ಟ್ ಸಹಕಾರ ನೀಡುತ್ತದೆ. ನಾವೆಲ್ಲರೂ ನಿಮ್ಮೊಡನೆ ವಾರ್ಷಿಕೋತ್ಸವದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.

ನಂತರ ಕವಿ ಪುತಿನ ದಹನ ಸ್ಥಳದ ರಕ್ಷಣೆ ಬಗ್ಗೆ ಮಾತನಾಡಿದ ಕೃಷ್ಣೇಗೌಡರು, ಸರ್ಕಾರಿ ಬಾಲಕರ ಶಾಲೆ ಮೈದಾನದಲ್ಲಿ ಕವಿ ಪುತಿನ ದಹನ ಸ್ಥಳವಿದೆ. ಈ ಸ್ಥಳ ನಮ್ಮ ಟ್ರಸ್ಟಿಗೆ ಜಾಗ ನೀಡುವುದು ಬೇಡ. ಶಿಕ್ಷಣ ಇಲಾಖೆ ಹೆಸರಲ್ಲೇ ಇರಲಿ. ನಾವು ದಹನ ಸ್ಥಳದ ಸುತ್ತ ತುಳಸಿ- ಹೂವಿನ ಗಿಡಗಳನ್ನು ಬೆಳಸಿ ಅದೊಂದು ಪ್ರವಾಸಿ ತಾಣವಾಗುವಂತೆ ಮಾಡಿ ನಿರ್ವಹಣೆಯನ್ನೂ ಮಾಡುವ ಯೋಜನೆ ಇದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಸಂತಾನರಾಮನ್, ಪುತಿನ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಕದಲಗೆರೆ ಶಿವಣ್ಣಗೌಡ, ಸಹಶಿಕ್ಷಕರಾದ ಮಹಾಲಕ್ಷ್ಮೀ, ಜಯಂತಿ, ಪೂರ್ಣಿಮ, ಶೃತಿ, ಗಿರಿಜ ಇದ್ದರು. ಶಾಲೆಗೆ ಭೇಟಿ ನೀಡಿದ ಕೃಷ್ಣೇಗೌಡರಿಗೆ ಮಕ್ಕಳು ಹೂಗುಚ್ಚನೀಡಿ ಬರಮಾಡಿಕೊಂಡರು.