ಚುನಾವಣಾ ನೀತಿ ಸಂಹಿತೆಯಿಂದಾಗಿ ಒಂದು ತಿಂಗಳು ಯಾವುದೇ ಕಾಮಗಾರಿಗೆ ಚಾಲನೆ ನೀಡಲಾಗಿರಲಿಲ್ಲ. ಈಗಾಗಲೇ ₹60- 70 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹಂತ- ಹಂತವಾಗಿ ಚಾಲನೆ ನೀಡಲಾಗುವುದು.

ಸಿದ್ದಾಪುರ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹4.05 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಅವರು ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟಾ- ಕೊಡಮಡಗಿ ರಾಜ್ಯ ಹೆದ್ದಾರಿಯ 48ರಲ್ಲಿ ₹1.15 ಕೋಟಿ ಹಾಗೂ ₹50 ಲಕ್ಷ ವೆಚ್ಚದಲ್ಲಿ ಎರಡು ಕಡೆ ತಡೆಗೋಡೆ ನಿರ್ಮಾಣ ಕಾಮಗಾರಿ, ಬಿಳಗಿ ಗ್ರಾಪಂ ವ್ಯಾಪ್ತಿಯ ಬಿಳಗಿ ಹೊಳೆ ಸಮೀಪ ₹1.35 ಕೋಟಿ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಬಿಳಗಿ ಗ್ರಾಪಂ ವ್ಯಾಪ್ತಿಯ ನಾಗಪ್ಪನಜಡ್ಡಿ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ನಿರ್ಮಿಸಿರುವ ಕಾಲುಸಂಕಕ್ಕೆ ₹20 ಲಕ್ಷ ವೆಚ್ಚದಲ್ಲಿ ಅಪ್ರೋಚ್ ನಿರ್ಮಾಣ ಕಾಮಗಾರಿ, ಕ್ಯಾದಗಿ ಗ್ರಾಪಂ ವ್ಯಾಪ್ತಿಯ ಹೊನ್ನಾವರ- ಮೆಣಸಿ ರಾಜ್ಯ ಹೆದ್ದಾರಿ 144ರಲ್ಲಿ ₹70 ಲಕ್ಷ ಅನುದಾನದಲ್ಲಿ ತಡೆಗೋಡೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ದೊಡ್ಮನೆ ಗ್ರಾಮ ಪಂಚಾಯಿತಿಯ ಹಸ್ವಿಗುಳಿ ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ಗಡಿಮನೆ ಹಳ್ಳಕ್ಕೆ ₹15 ಲಕ್ಷ ವೆಚ್ಚದಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆಯಿಂದಾಗಿ ಒಂದು ತಿಂಗಳು ಯಾವುದೇ ಕಾಮಗಾರಿಗೆ ಚಾಲನೆ ನೀಡಲಾಗಿರಲಿಲ್ಲ. ಈಗಾಗಲೇ ₹60- 70 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹಂತ- ಹಂತವಾಗಿ ಚಾಲನೆ ನೀಡಲಾಗುವುದು ಎಂದರು.

₹4.05 ಕೋಟಿ ವೆಚ್ಚದ ಅನೇಕ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಮೂರುವರೆ ವರ್ಷದಲ್ಲಿ ಅನುಷ್ಠಾನಗೊಂಡ ಅನೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೇ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಸರ್ಕಾರದ ಅನುದಾನ ತರುವಲ್ಲಿ ಚುನಾಯಿತ ಪ್ರತಿನಿಧಿಗಳು ಎಷ್ಟು ಕ್ರಿಯಾಶೀಲರಾಗಿರುತ್ತಾರೋ ಅಷ್ಟು ಅನುದಾನ ತರಲು ಸಾಧ್ಯ. ಅದರಂತೆ ಸರ್ಕಾರದ ಅಧಿಕಾರಿಗಳು, ಎಂಜಿನಿಯರ್ ಹಾಗೂ ಸ್ಥಳೀಯರು ಹೆಚ್ಚು ಮುತುವರ್ಜಿ ವಹಿಸಿದರೆ ತ್ವರಿತಗತಿಯಲ್ಲಿ ಗುಣಮಟ್ಟದ ಕೆಲಸ ಆಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಇದ್ದರು.