ಶಿಕ್ಷಕರ ಭವನ ನಿರ್ಮಾಣಕ್ಕೂ ಸಹಕಾರ: ಶಾಸಕ ಎಆರ್‌ಕೆ

| Published : Sep 29 2024, 01:30 AM IST

ಸಾರಾಂಶ

ಯಳಂದೂರು ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿ ಸೋಮವಾರ ಶುಕ್ರವಾರ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಕಾರ್ಯಕ್ರಮವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಈಗಾಗಲೇ ಶಿಕ್ಷಕರ ಭವನಕ್ಕೆ ಸ್ಥಳವನ್ನು ಗುರುತು ಮಾಡಲಾಗಿದ್ದು ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮತಿ ಸಿಕ್ಕ ಕೂಡಲೇ ಶಿಕ್ಷಕರು ಕಟ್ಟಡ ನಿರ್ಮಾಣ ಮಾಡಲು ಅವಕಾಶವಾಗುತ್ತದೆ. ಇದಕ್ಕೆ ನನ್ನ ಸಹಕಾರವೂ ಇರಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ಸೋಮವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯದ ನಡುವೆ ಸಮಯ ಕೊಡಲು ಕಷ್ಟವಾಗುತ್ತದೆ. ಆದರೂ ಕೂಡ ಇವರ ಮಕ್ಕಳು ಉತ್ತಮ ಶಿಕ್ಷಣ ನೀಡಲು ಹೆಚ್ಚು ಕಾಳಜಿ ವಹಿಸಬೇಕು. ರಾಜ್ಯದಲ್ಲಿ ಶಿಕ್ಷಕ ಹುದ್ದೆ ಹಾಗೂ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ಭರ್ತಿ ಮಾಡಲು ಸರ್ಕಾರ ಹಂತಹಂತವಾಗಿ ಕ್ರಮ ವಹಿಸಲಿದೆ ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ೧೨೮೧ ಸರ್ಕಾರಿ ಹುದ್ದೆಗಳಿದ್ದು ಇದರಲ್ಲಿ ಕೇವಲ ೫೮೧ ಹುದ್ದೆಗಳು ಮಾತ್ರ ಭರ್ತಿಯಾಗಿದೆ. ನಮಗೆ ರಾಜ್ಯ ಸರ್ಕಾರ ೭ನೇ ವೇತನ ಆಯೋಗವನ್ನು ಜಾರಿಗೊಳಿಸಿದ್ದು ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗಿದೆ. ಇದಕ್ಕೆ ನಾವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಕೃತಜ್ಞರಾಗಿದ್ದೇವೆ. ಹಾಗೆ ಹಲವು ದಶಕಗಳಿಂದಲೂ ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಲು ನಾವು ಮನವಿ ಸಲ್ಲಿಸಲಾಗುತ್ತಿದ್ದು ಈಗಿನ ಶಾಸಕರು ಇದಕ್ಕೆ ಜಾಗವನ್ನು ಗುರುತು ಮಾಡಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ಸಂಘದ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಇದರೊಂದಿಗೆ ನಮಗೆ ವಸತಿ ಗೃಹಗಳ ಸಮಸ್ಯೆ ಇದ್ದು ಪಟ್ಟಣದ ಪೊಲೀಸ್ ಕ್ವಾರ್ಟರ್ಸ್‌ ಹಾಗೂ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಹೊಸದಾಗಿ ವಸತಿ ನಿವೇಶನಗಳನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ತಹಸೀಲ್ದಾರ್ ಜಯಪ್ರಕಾಶ್ ಮಾತನಾಡಿದರು. ಪಪಂ ಸದಸ್ಯರಾದ ವೈ.ಜಿ.ರಂಗನಾಥ, ಬಿ.ರವಿ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಪ್ರಭುಪ್ರಸಾದ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಮ್ಮನಪುರ ಮಹೇಶ್, ರಾಜ್ಯ ಸಮಿತಿ ಸದಸ್ಯ ಗೋವಿಂದ, ಸೇರಿದಂತೆ ಅನೇಕರು ಇದ್ದರು.