ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿ ಅನ್ನಪ್ರಸಾದ ಭವನದ ನಿರ್ವಹಣೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮಾಜಿ ಸಚಿವ ಹಾಗೂ ದಿಶಾ ಸಮಿತಿ ಸದಸ್ಯ ಸಿ.ಎಸ್ ಪುಟ್ಟರಾಜು ವಾಗ್ದಾನ ಮಾಡಿದರು.ಭಾನುವಾರ ಮೇಲುಕೋಟೆಯ ಅನ್ನದಾನ ಭವನಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲೇ ತಯಾರಿಸಿದ ಪ್ರಸಾದವನ್ನು ಸ್ವೀಕರಿಸಿ ಸಿಬ್ಬಂದಿಯೊಡನೆ ಮಾಹಿತಿ ಪಡೆದರು.
ಸ್ವಚ್ಛತೆ ಹಾಗೂ ಅನ್ನದಾನ ನಿರ್ವಹಣೆ ಪ್ರಸಾದದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿ.ಎಸ್.ಪಿ ಪತ್ರಕರ್ತರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ವಿಶೇಷ ಅನುದಾನದಲ್ಲಿ ನನ್ನ ಅವಧಿಯಲ್ಲೇ ನಿರ್ಮಾಣಗೊಂಡು ಮುಖ್ಯಮಂತ್ರಿಗಳಿಂದ ವೈರಮುಡಿ ಉತ್ಸವದಂದೇ ಉದ್ಘಾಟಿಸಲಾಗಿತ್ತು ಎಂದರು.ಆದರೆ, ಕಾರಣಾಂತರದಿಂದ ನಿತ್ಯ ಅನ್ನದಾನ ಆರಂಭಿಸಲಾಗಿರಲಿಲ್ಲ. ಇದೀಗ ಅನ್ನದಾನ ಭವನ ವಾರಕ್ಕೆರಡು ದಿನ ಭಕ್ತರ ಉಪಯೋಗಕ್ಕೆ ದೊರೆಯುತ್ತಿರುವುದು ಸ್ವಾಗತಾರ್ಹ. ಮೇಲುಕೋಟೆಯಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸುವ ಮತ್ತು ಅನ್ನದಾನ ಭವನ ನಿರ್ವಹಣೆಯಲ್ಲಿ ಯಾರೂ ರಾಜಕೀಯ ಮಾಡಬಾರದು. ನಾನೂ ಸಹ ನಿರ್ವಹಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಇದೇ ವೇಳೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಪ್ರಸಾದ ಸ್ವೀಕರಿಸಿ ಮಾತನಾಡಿ, ನಾವೆಷ್ಟೆ ಶ್ರೀಮಂತರಾದರೂ ಭಗವಂತನ ಸನ್ನಿಧಿಯ ಪ್ರಸಾದ ಮತ್ತು ದರ್ಶನ ಅತ್ಯಂತ ಪವಿತ್ರವಾದುದ್ದು. ಹಾಗಾಗಿ ಕ್ಷೇತ್ರದ ಅಭಿವೃದ್ಧಿ ಮತ್ತು ಅನ್ನದಾನ ಭವನದ ನಿರ್ವಹಣೆಗೆ ಕೈಲಾದ ಸಹಕಾರ ನೀಡಲು ಸದಾ ಸಿದ್ಧ ಎಂದರು.ಈ ವೇಳೆ ಮೇಲುಕೋಟೆ ಯುವ ಮುಖಂಡರಾದ ಈಶಮುರುಳಿ ಪುಳಿಯೋಗರೆ ರವಿ, ದೇವಾಲಯದ ಸಿಬ್ಬಂದಿ ಹಾಜರಿದ್ದರು.ಅನಧಿಕೃತವಾಗಿ ಮನೆ ಕಟ್ಟಡ ನಿರ್ಮಾಣ: ಗ್ರಾಮಸ್ಥರ ಪ್ರತಿಭಟನೆ
ಮಂಡ್ಯ:ಅನಧಿಕೃತ ಮನೆ ಕಟ್ಟಡ ನಿರ್ಮಾಣ ವಿರೋಧಿಸಿ ತಾಲೂಕಿನ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಅಕ್ರಮವಾಗಿ ಶೀಟ್‌ಗಳನ್ನು ಹಾಕಿಕೊಂಡು ಕಟ್ಟಡ ಕಟ್ಟಿಕೊಂಡಿದ್ದಾರೆ. ಮತ್ತೊಬ್ಬರು ಮನೆ ನಿರ್ಮಿಸಲು ಕಟ್ಟಡ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಜಿಪಂ, ತಾಪಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ಕಳೆದ ವಾರವಷ್ಟೇ ಸ್ಥಳೀಯ ಶಾಸಕರಿಗೂ ಮನವಿ ಮಾಡಲಾಗಿ ಅವರು ಸಹ ಕ್ರಮ ತೆಗೆದುಕೊಂಡಿಲ್ಲ. ಈಗ ನಿರ್ಮಿಸುತ್ತಿರುವ ಕಟ್ಟಡವು ಕಂಬದಹಳ್ಳಿ ಗ್ರಾಪಂ ವ್ಯಾಪ್ತಿಯ ನರಗಲು ಗ್ರಾಮ ಠಾಣಾ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕ ಉದ್ದೇಶಕ್ಕೆಂದು ಈ ಸ್ಥಳ ಬಳಸಿಕೊಂಡರೆ ತೊಂದರೆ ಆಗುವುದಿಲ್ಲ. ಆದರೆ, ಅತಿಕ್ರಮ ಪ್ರವೇಶ ಮಾಡಿ ತೊಂದರೆ ಕೊಡಲೆಂದೇ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸೋಮಶೇಖರ್, ಆನಂದ್, ಸತೀಶ್, ಚೇತನ್, ಶಿವರಾಮಯ್ಯ, ಚನ್ನೇಗೌಡ, ನಿತಿನ್, ಯಜಮಾನ್ ತೂರಪ್ಪ, ಗಿರೀಶ್ ಭಾಗವಹಿಸಿದ್ದರು.