ಸಾರಾಂಶ
ಗದಗ: ಪೊಲೀಸ್ ಠಾಣೆಗಳು ಜನಸ್ನೇಹಿಗಳಾಗಿವೆ, ಅಪರಾಧ ಇಳಿಮುಖವಾಗಲು ಸಾರ್ವಜನಿಕರ ಸಹಕಾರ ಅವಶ್ಯ ಎಂದು ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ.ಪಾಟೀಲ ಹೇಳಿದರು.
ಅವರು ಮಂಗಳವಾರ ನಗರದ ಸುವಿಧಾ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ಸಂಘದ 2024ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಪೊಲೀಸ್ ಠಾಣೆ, ಪೊಲೀಸ್ ಅಧಿಕಾರಿಗಳೆಂದರೆ ಸಾರ್ವಜನಿಕರಲ್ಲಿ ಭಯದ ವಾತಾವರಣ ದೂರಗೊಳ್ಳಬೇಕು. ಅನ್ಯಾಯ, ಶೋಷಣೆ, ವಂಚನೆ, ತಂಟೆ ತಕರಾರುಗಳಿದ್ದರೆ ಸಮಾಜಘಾತುಕ ಶಕ್ತಿಗಳಿಂದ ತೊಂದರೆಯಾಗುತ್ತಿದ್ದರೆ ಜನಸ್ನೇಹಿಗಳಾಗಿರುವ ಪೊಲೀಸ್ ಠಾಣೆಗೆ ಬಂದು ಅಧಿಕಾರಿಗಳನ್ನಾಗಲಿ, ಠಾಣೆಯ ಸಿಬ್ಬಂದಿಯನ್ನು ಕಂಡು ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶವಿದೆ ಎಂದರು.
ಮಹಿಳೆಯರ ಹಾಗೂ ಹಿರಿಯ ನಾಗರಿಕರ ಬಗ್ಗೆ ಗೌರವ ಮತ್ತು ಸಹಾನುಭೂತಿ ಹೊಂದಿರುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಸಮಸ್ಯೆಗೆ ಸಮಾಧಾನಕರ ಉತ್ತರ ನೀಡುವರು. ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಗದಗ ಪರಿಸರದಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಹಿರಿಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಸಮಾಜ ಸುಧಾರಣೆಯಲ್ಲಿ ಸರ್ವರ ಸಹಕಾರ ಇರಬೇಕೆಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ವಿ. ಸಂಕನೂರ ಸಂಘದ ಕಾರ್ಯಚಟುವಟಿಕೆ, ನಿರ್ದೆಶಕರ ಸಹಕಾರ, ಗ್ರಾಹಕರ ಬೆಂಬಲ ಸ್ಮರಿಸಿದರು. ಸಂಘದ ಉಪಾಧ್ಯಕ್ಷ ನಿವೃತ್ತ ಶಿಕ್ಷಕ ಆರ್.ಎಫ್. ಅಗಸಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಶಾಂತಾ ಸಂಕನೂರ, ದ್ರುವಶೆಟ್ಟಿ ಅಬ್ಬಿಗೇರಿ, ರೇಖಾ ಆಸಂಗಿ, ಕೆ.ನಿಖಿಲ ರೆಡ್ಡಿ, ಸಂಗಮೇಶ್ವರಿ ಯಳವತ್ತಿ ಉಪಸ್ಥಿತರಿದ್ದರು.ಪದ್ಮಾ ಜಾಡರ ಪ್ರಾರ್ಥಿಸಿದರು, ವೀರೇಶ ಹನಮಂತಗೌಡ್ರ ಪರಿಚಯಿಸಿದರು, ರವಿ ಹೊಸೂರ ನಿರೂಪಿಸಿದರು. ದೀಪಾ ನರಗುಂದ ವಂದಿಸಿದರು.