ಅಭಿಯಾನದ ಯಶಸ್ಸಿಗೆ ಸಹಕಾರ ಅಗತ್ಯ

| Published : Oct 11 2024, 11:46 PM IST

ಸಾರಾಂಶ

ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಹಾಗೂ ನಗರ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯದಲ್ಲಿ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು

ಗದಗ: ಜಿಲ್ಲಾದ್ಯಂತ ನ. 4 ರಿಂದ 21 ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ (ಎಲ್ಸಿಡಿಸಿ) ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದ ಯಶಸ್ಸಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 2024-25 ನೇ ಸಾಲಿನಲ್ಲಿ ಕುಷ್ಟ ರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ (ಎಲ್ಸಿಡಿಸಿ) ಹಮ್ಮಿಕೊಳ್ಳುವ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್‌ಸಿಡಿಸಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ಭಾಗವಹಿಸುವಿಕೆ ಮುಖ್ಯವಾಗಿದೆ. ಪ್ರತಿ ಗ್ರಾಪಂಯಿಂದ ಈ ಅಭಿಯಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಗ್ರಾಪಂದಿಂದ ಕಸದ ವಿಲೇವಾರಿ ವಾಹನದ ಮುಖಾಂತರ ಅಭಿಯಾನದ ಕುರಿತು ಮೈಕಿಂಗ್ ಮಾಡಿಸುವುದು. ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಪ್ರತಿನಿತ್ಯ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವುದು. ಒಟ್ಟಾರೆ ಅಭಿಯಾನ ವ್ಯವಸ್ಥಿತವಾಗಿ ಜರುಗಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ನೀಲಗುಂದ ಮಾತನಾಡಿ ಎಲ್.ಸಿ.ಡಿ.ಸಿ. ಸಮೀಕ್ಷಾ ಕಾರ್ಯಕ್ರಮ ನ. 4 ರಿಂದ 21 ರವರೆಗೆ (ರಜಾ ದಿನ ಹೊರತುಪಡಿಸಿ) ಹಮ್ಮಿಕೊಳ್ಳಲಾಗುತ್ತಿದ್ದು, ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ 10 ಸಮೀಕ್ಷಾ ತಂಡಗಳಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು. ಜಿಲ್ಲೆಯಲ್ಲಿ 813 ಸಮೀಕ್ಷಾ ತಂಡಗಳ ಕ್ರಿಯಾ ಯೋಜನೆ ರಚಿಸಲಾಗಿದೆ. ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಹಾಗೂ ನಗರ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯದಲ್ಲಿ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಕುಷ್ಟ ರೋಗ ವಿಭಾಗ) ದ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮೀನಾಕ್ಷಿ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ರಾಜೇಂದ್ರ ಬಸರಿಗಿಡದ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ.ಕೆ. ಭಜಂತ್ರಿ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಅರುಂಧತಿ ಕುಲಕರ್ಣಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರೂಪಸೇನ ಚವ್ಹಾಣ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.