ಶಾಂತಿಯುತ ವಾತವರಣ ನಿರ್ಮಾಣಕ್ಕೆ ಸಹಕಾರ ಅತ್ಯಗತ್ಯ: ಎಸ್ಪಿ

| Published : Jan 20 2024, 02:02 AM IST

ಸಾರಾಂಶ

ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಗಾಗಿ ಶ್ರಮಿಸುವ ಇಲಾಖೆಯಾಗಿದ್ದು, ಜಿಲ್ಲೆಯಲ್ಲಿ ಶಾಂತಿಯುತ ವಾತವರಣ ನಿರ್ಮಾಣವಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.

ರಾಯಚೂರು: ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಗಾಗಿ ಶ್ರಮಿಸುವ ಇಲಾಖೆಯಾಗಿದ್ದು, ಜಿಲ್ಲೆಯಲ್ಲಿ ಶಾಂತಿಯುತ ವಾತವರಣ ನಿರ್ಮಾಣವಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾದದ್ದು, ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು.

ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ನಾಶಪಡಿಸುವ ಮತ್ತು ಕಳೆದುಕೊಂಡ ಸ್ವತ್ತನ್ನು ಮರಳಿ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನುದ್ದೇಶಿಸಿ ಶುಕ್ರವಾರ ಮಾತನಾಡಿದರು.

ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹೆಚ್ಚಿನ ಜಾಗೃತರಾಗಬೇಕು. ಮನೆಯಿಂದ ಎಲ್ಲಿಯಾದರು ಹೋಗುವುದಾದರೇ ಅಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ 112ಗೆ ತಿಳಿಸಬೇಕು. ಆಗ ಪೊಲೀಸ್ ಇಲಾಖೆಯಿಂದ ಮನೆಯ ಬಾಗಲಿಗೆ ಚೀಟಿ ಅಳವಡಿಸಲಾಗುತ್ತದೆ ಆ ಚೀಟಿಯಲ್ಲಿ ದಿನನಿತ್ಯ ಬೀಟ್ಸ್‌ಗೆ ಬರುವ ಪೊಲಿಸ್ ಸಿಬ್ಬಂದಿ ನೀವು ಮನೆಗೆ ಹಿಂತಿರುಗುವ ವರೆಗೂ ಸಹಿ ಮಾಡುತ್ತಾರೆ ಇದರಿಂದ ನಿಮ್ಮ ಮನೆಯ ಕಾವಲು ಹೆಚ್ಚಿನ ಭದ್ರತೆಯಿಂದ ಕೂಡಿರುತ್ತದೆ. ಈ ನೂತನ ಪದ್ದತಿಯನ್ನು ಜಿಲ್ಲೆಯಲ್ಲಿ ಅಳವಡಿಸಲಾಗುತ್ತಿದೆ ಎಂದರು.

ಬ್ಯಾಂಕ್‌ನಿಂದ ಹಣವನ್ನು ತೆಗೆದುಕೊಂಡು ಬರಿವಾಗ ಅತ್ಯಂತ ಎಚ್ಚರದಿಂದ ಇರಬೇಕು ಇಲ್ಲವಾದಲ್ಲಿ, ನಿಮ್ಮ ಗಮನವನ್ನು ಬೇರೆಡೆ ಇರಿಸಿ ಹಣವನ್ನು ಕದಿಯಬಹುದಾಗಿರುತ್ತದೆ. ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಫೋನ್‌ಗಳಲ್ಲಿ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಎಂದು ತಿಳಿಸಿದರು.

ಮೊಬೈಲ್ ಫೋನ್‌ಗಳು ಕಳ್ಳತನಂವಾದಲ್ಲಿ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ಆಗ ಪೊಲೀಸ್ ಇಲಾಖೆಯಿಂದ ತನಿಖೆ ಕೈಗೊಂಡು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಕಂಡುಹಿಡಿಯಬಹುದಾಗಿದೆ ಎಂದರು.

ಹಳೆ ಸೈಲನ್ಸರ್‌ಗಳ ನಾಶ: ಹೊಗೆ ಸೂಸುವ, ಕರ್ಕಶ ಶಬ್ಧ ಮಾಡುವ ಸೈಲನ್ಸರ್‌ಗಳನ್ನು ರೋಡ್‌ರೋಲರ್ ಮೂಲಕ ನಾಶಪಡಿಸಲಾಯಿತು. ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಕರು ಕಳೆದುಕೊಂಡ ಸ್ವತ್ತುಗಳನ್ನು ಸಾರ್ವಜನಿಕರಿಗೆ ಮರಳ ಹಿಂದಿರುಗಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ, ಹರೀಶ ಸೇರಿದಂತೆ ಲಿಂಗಸುಗೂರು, ಸಿಂಧನೂರು ಹಾಗೂ ರಾಯಚೂರಿನ ಜಿಲ್ಲಾ ಪೊಲೀಸ್ ಉಪಅಧೀಕ್ಷಕರು, ವಿವಿಧ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.