ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲು ಸಹಕಾರ ಅತ್ಯವಶ್ಯ

| Published : Sep 26 2024, 10:37 AM IST / Updated: Sep 26 2024, 10:38 AM IST

ಸಾರಾಂಶ

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತ ಸದಸ್ಯರಿಗಾಗಿ ಸಹಕಾರಿ ತತ್ವದಡಿಯಲ್ಲಿ ಪ್ರಾರಂಭವಾಗಿದ್ದು, ಕಾರ್ಖಾನೆಯು ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟಿಸಿಡಿ ಯಿಂದ 4500 ಟಿಸಿಡಿ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮೆಲ್ಲರ ಸಹಕಾರ ಅತ್ಯವಶ್ಯವಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತ ಸದಸ್ಯರಿಗಾಗಿ ಸಹಕಾರಿ ತತ್ವದಡಿಯಲ್ಲಿ ಪ್ರಾರಂಭವಾಗಿದ್ದು, ಕಾರ್ಖಾನೆಯು ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟಿಸಿಡಿ ಯಿಂದ 4500 ಟಿಸಿಡಿ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮೆಲ್ಲರ ಸಹಕಾರ ಅತ್ಯವಶ್ಯವಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ತಾಲೂಕಿನ ಸಿದ್ದಸಮುದ್ರ ಹತ್ತಿರದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಂಗಾಮಿನಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆಯು ಕಬ್ಬು ಬೆಳೆಗಾರರ ಸಮಸ್ಯೆ ಅರಿತು ಸುಮಾರು 2,07,927ಮೆಟ್ರಿಕ್ ಟನ್ ಕಬ್ಬು ಅರೆದು ಶೇ.12.05 ಸಕ್ಕರೆ ಇಳುವರಿ ಪ್ರಮಾಣದಲ್ಲಿ 2,49,264 ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಿ ರೈತರ ಬಿಲ್‌ನ್ನು ಪಾವತಿ ಮಾಡಲಾಗಿದೆ ಎಂದರು.ಪ್ರಸಕ್ತ ಹಂಗಾಮಿನಲ್ಲಿ ರೈತರು ಗುಣಮಟ್ಟದ ಕಬ್ಬು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸಬೇಕು. ಈ ಬಾರಿ ರೈತರಿಗೆ ಕಬ್ಬು ಕಟಾವು ಹಾಗೂ ಪೂರೈಕೆ ಮಾಡುವಲ್ಲಿ ಯಾವುದೇ ಲೋಪ ದೋಷ ಆಗದಂತೆ ನಿಗಾ ವಹಿಸಲು ಫೀಲ್ಡ್ ಮ್ಯಾನ್‌ಗಳಿಗೆ ಸೂಚಿಸಲಾಗುವುದು. ಅಲ್ಲದೇ ಕಬ್ಬು ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಈ ಕಾರ್ಖಾನೆಯನ್ನು ರಾಜ್ಯದಲ್ಲಿಯೇ ಉತ್ತಮ ಕಾರ್ಖಾನೆಯಾಗಿ ಹೊರ ಹೊಮ್ಮಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಗುತ್ತಿದ್ದು, ಕಬ್ಬು ಬೆಳೆಗಾರರಿಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.ಕಬ್ಬು ಬೆಳೆಗಾರರು ತಮಗಾಗುವ ಸಮಸ್ಯೆ ಉಂಟಾಗುವ ಕುರಿತು ತಮ್ಮ ಸಮಸ್ಯೆಗಳನ್ನು ಹೇಳುವಾಗ ಶಾಂತ ಚಿತ್ತದಿಂದ ಆಲಿಸಿ ಪರಿಹಾರ ಕಂಡು ಕೊಳ್ಳಲಾಗುವುದು. ಕಾರ್ಖಾನೆಯನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಾರದು ಎಂದು ರೈತರು ಒತ್ತಾಯಿಸಿದಾಗ ಕಾರ್ಖಾನೆ ತುಂಬಾ ಹಳೆಯದಾಗಿದ್ದರಿಂದ ಯಂತ್ರೋಪಕರಣಗಳ ಪುನಚೇತನಗೊಂಡಾಗ ಮಾತ್ರ ಸಾಲದಿಂದ ಮುಕ್ತಿ ಕಾಣಲು ಸಾಧ್ಯ ಎಂದರು.2023-24 ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಲ್ಲಿನ ತಾಂತ್ರಿಕ ನೈಪುಣ್ಯತೆಗಳನ್ನು ಪರಿಗಣಿಸಿ ಸಿಸ್ಟಾ ಸಂಸ್ಥೆಯು ಕಾರ್ಖಾನೆಗೆ ಬೆಸ್ಟ್ ಟೆಕ್ನಿಕಲ್ ಎಪಿಸೆನ್ಸಿ ಅವಾರ್ಡ್‌ ಪ್ರಶಸ್ತಿ ನೀಡಿ ಪುರಸ್ಕರಿಸಿದನ್ನು ಹೇಳಲು ಹೆಮ್ಮೆ ಎನಿಸುತ್ತದೆ. ಕಾರ್ಖಾನೆ ಪ್ರಗತಿಗೆ ಕಾರ್ಮಿಕರು, ಸಿಬ್ಬಂದಿ ವರ್ಗ, ಕಬ್ಬು ಬೆಳೆಗಾರರ ಮತ್ತು ಆಡಳಿತ ಮಂಡಳಿ ಸಹಕಾರ ಮೂಲ ಕಾರಣವಾಗಿದ್ದು, ರೈತರು ಗುಣಮಟ್ಟದ ಕಬ್ಬು ಪೂರೈಸಲು ಮನವಿ ಮಾಡಿದರು. ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಆರ್ಥಿಕ ಸಂಕಷ್ಟದ ಮಧ್ಯೆಯೂ ಕೂಡ ಕಬ್ಬು ಪೂರೈಸಿದ ಎಲ್ಲ ರೈತರಿಗೆ ಬಿಲ್ ಪಾವತಿ ಮಾಡಲಾಗಿದೆ ಎಂದರು.

ಕಾರ್ಯದರ್ಶಿ ಅಶೋಕ ಬೊಮ್ಮಣ್ಣವರ ವಾರ್ಷಿಕ ವರದಿ ಮಂಡಿಸಿದರು. ವೇದಿಕೆ ಮೇಲೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ, ನಿರ್ದೇಶಕರುಗಳಾದ ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ರಾಜು ಕುಡಸೋಮನ್ನವರ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೋಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೇಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಮುರಳಿಧರ ಮಲ್ಲೂರ, ಬಸವರಾಜ ಬೋಳಗೌಡ್ರ ಇದ್ದರು. ಬಾಬು ಖಂಡೊಜಿ ರೈತ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿ, ಕಾರ್ಮಿಕರು ಸಾವಿರಾರು ರೈತರು ಪಾಲ್ಗೊಂಡಿದ್ದರು.

ಕಾರ್ಖಾನೆಯಲ್ಲಿ ಹಳೆಯ ಯಂತ್ರೋಪಕರಣಗಳು ಇರುವುದರಿಂದ ಮೇಲಿಂದ ಮೇಲೆ ಸಮಸ್ಯೆಯಾಗುತ್ತಿವೆ. ಕಾರಣ ಶೇರುದಾರರು ಕಾರ್ಖಾನೆ ಆಡಳಿತ ಮಂಡಳಿ ಕೈಗೊಂಡ ನಿರ್ಣಯಗಳಿಗೆ ತಮ್ಮೆಲ್ಲರ ಸಹಕಾರ ಅತ್ಯವಶ್ಯವಾಗಿದೆ. ಇದರಲ್ಲಿ ರೈತರ ಮತ್ತು ಕಾರ್ಮಿಕರ ಉಜ್ವಲ ಭವಿಷ್ಯ ಅಡಗಿದೆ.

-ಬಸವರಾಜ ಬಾಳೇಕುಂದರಗಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು.