ಸಾರಾಂಶ
ಪ್ರತಿಯೊಂದು ಜಯಂತಿಗೆ ಸರ್ಕಾರದಿಂದ ₹ 25 ಸಾವಿರ ಅನುದಾನ ಇರುತ್ತದೆ. ಇತರೆ ಜಯಂತಿಗಳು ಆಯಾ ಸಮುದಾಯಗಳ ಸಹಕಾರ, ಆರ್ಥಿಕ ನೆರವಿನೊಂದಿಗೆ ನಡೆಯುತ್ತಾ ಬಂದಿವೆ.
ಕುಷ್ಟಗಿ:
ಪಟ್ಟಣದಲ್ಲಿ ಬಸವ ಜಯಂತಿಯನ್ನು ಏ. 30ರಂದು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತಾಲೂಕಾಡಳಿತದ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬಸವ ಜಯಂತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನ ಅಭಿಮಾನಿಗಳು ಹಾಗೂ ಸಂಘಟಕರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಕು ಎಂದರು.
ಸಮಾಜದ ಮುಖಂಡ ಟಿ. ಬಸವರಾಜ ಮಾತನಾಡಿ, ಬಸವ ಜಯಂತಿ ಅಂಗವಾಗಿ ಈಗಾಗಲೇ ದಿನಂಪ್ರತಿ ಸಂಜೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ದಿನದಂದು ವಚನ ಪುಸ್ತಕ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡ ರಾಮನಗೌಡ ಪಾಟೀಲ ಮಾತನಾಡಿ, ಬಸವ ಜಯಂತಿ ಹಾಗೂ ಬಸವ ತತ್ವ ಪ್ರಚಾರಕ್ಕಾಗಿ ₹ 5 ಲಕ್ಷ ಒದಗಿಸಬೇಕೆಂದು ಮನವಿ ಸಲ್ಲಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪ್ರತಿಯೊಂದು ಜಯಂತಿಗೆ ಸರ್ಕಾರದಿಂದ ₹ 25 ಸಾವಿರ ಅನುದಾನ ಇರುತ್ತದೆ. ಇತರೆ ಜಯಂತಿಗಳು ಆಯಾ ಸಮುದಾಯಗಳ ಸಹಕಾರ, ಆರ್ಥಿಕ ನೆರವಿನೊಂದಿಗೆ ನಡೆಯುತ್ತಾ ಬಂದಿವೆ ಎಂದು ತಿಳಿಸಿದರು.ಬಸವ ಭವನದ ಸುತ್ತಲಿನ ಪ್ರದೇಶ ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳಲು ಹಾಗೂ ಬಸವೇಶ್ವರ ವೃತ್ತವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದ ರೂಪೂರೇಷೆಯನ್ನು ಬಸವ ಸಮಿತಿ ಸಭೆ ಮಾಡಿ ಏನೇನು ಮಾಡಬೇಕು ಎಂಬುದರ ಕುರಿತು ಗಮನಕ್ಕೆ ತರಬೇಕು. ನಂತರ ಕ್ರಮ ವಹಿಸಲಾಗುವದು ಎಂದರು.ಈ ಸಂದರ್ಭದಲ್ಲಿ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಅನೀಲ ಆಲಮೇಲ, ದೇವೇಂದ್ರಪ್ಪ ಬಳೂಟಗಿ, ನಿಂಗಪ್ಪ ಮಂಗಳೂರು, ಅಡಿವೆಪ್ಪ ಕುಷ್ಟಗಿ, ನಬಿಸಾಬ ಕುಷ್ಟಗಿ, ಎಸ್.ಕೆ. ತಟ್ಟಿ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಮಹದೇವಪ್ಪ ಮಹಾಲಿಂಗಪುರ, ಉಮಾಪತಿ ಅಕ್ಕಿ, ಮಹೇಶ ಹಡಪದ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಇದ್ದರು.ಭಾವಚಿತ್ರದ ಅದ್ಧೂರಿ ಮೆರವಣಿಗೆ
ಕುಷ್ಟಗಿಯಲ್ಲಿ ಬುಧವಾರ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ ಮಾತನಾಡಿ, ಅಂದು ಬಸವಣ್ಣನ ಭಾವಚಿತ್ರ ಮೆರವಣಿಗೆ ತಹಸೀಲ್ದಾರ್ ಕಾರ್ಯಾಲಯದಿಂದ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ವರೆಗೆ ನಡೆಯಲಿದೆ. ಡೊಳ್ಳು, ಭಜನಾ ಮೇಳದೊಂದಿಗೆ ಮಹಿಳೆಯರು ಕುಂಭ ಹೊತ್ತು ಸಾಗುವರು. ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಈ ವೇಳೆ ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಮಹಾದೇವಪ್ಪ ಮಹಾಲಿಂಗಪುರ, ಉಮಾಪತಿ ಅಕ್ಕಿ, ವೀರೇಶ ಕರಡಿ ಎಸ್.ಕೆ. ತಟ್ಟಿ, ದೊಡ್ಡಬಸಪ್ಪ ಶಿವನಗುತ್ತಿ, ಗುರುರಾಜ್ ನಾಡಗೌಡ, ರಾಮನಗೌಡ ಪಾಟೀಲ್, ಬಸವ ಸಮಿತಿಯ ಕಾರ್ಯದರ್ಶಿ ಮಹೇಶ ಹಡಪದ ಸೇರಿದಂತೆ ಇತರರು ಇದ್ದರು.