ಜಿಲ್ಲೆಯಲ್ಲಿ ಕೈಗಾರಿಕೆ ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯ: ಜಾನಕಿ ಸಲಹೆ

| Published : Jan 24 2025, 12:45 AM IST

ಜಿಲ್ಲೆಯಲ್ಲಿ ಕೈಗಾರಿಕೆ ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯ: ಜಾನಕಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಕೃಷಿ ಆಧಾರಿತ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಹವಾಮಾನ ಹೊಂದಿದ್ದು, ಪರಿಶ್ರಮ ಮತ್ತು ಧೈರ್ಯ ಮುಖ್ಯ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉದ್ಯಮಿಗಳಿಗೆ ಬಾಗಲಕೋಟೆ ಜಿಲ್ಲೆ ಮುಕ್ತ ಅವಕಾಶವಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಧೈರ್ಯ ಹಾಗೂ ಪರಿಶ್ರಮ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ವಿಟಿಪಿಸಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಗುರುವಾರ ನಡೆದ ಲೀನ್ ಯೋಜನೆ, ಝಡ್.ಇ.ಡಿ ಹಾಗೂ ರಫ್ತು ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಗರ ಉದ್ಘಾಟಿಸಿ ಮಾತನಾಡಿದ ಅವರು, ಕಾಸಿಯಾ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಬೆಂಬಲ ಮತ್ತು ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಬಾಗಲಕೋಟೆ ಕೃಷಿ ಆಧಾರಿತ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಹವಾಮಾನ ಹೊಂದಿದ್ದು, ಪರಿಶ್ರಮ ಮತ್ತು ಧೈರ್ಯ ಮುಖ್ಯವಾಗಿದೆ ಎಂದರು.

ಬಾಗಲಕೋಟೆ ಯುನಿಯನ್ ಮರ್ಚಂಟ್ ಅಸೋಶಿಯೇಷನ್‌ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ಏಷ್ಯಾದಲ್ಲಿಯೇ ಮುಳುಗಡೆ ಹೊಂದಿದ ದೊಡ್ಡ ಪ್ರದೇಶ ಬಾಗಲಕೋಟೆ ಜಿಲ್ಲೆಯಾಗಿದೆ. ಮುಳುಗಡೆ ಹೊಂದಿದ ನಂತರ ಮೂರು ಭಾಗಗಳಾಗಿ ಹರಿದು ಹಂಚಿ ಹೋಗಿದೆ. ಇಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ ಹಾಗೂ ವ್ಯಾಪಾರಕ್ಕೆ ಉಪಯುಕ್ತವಾದ ವಾತಾವರಣ ಇದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಇಲ್ಲಿ ಈ ಎಲ್ಲ ಕ್ಷೇತ್ರಕ್ಕೆ ದುಡಿಯುವ ಬಂಡವಾಳ ಹಾಕುವ ಬಂಡವಾಳ ಶಾಹಿಗಳು ಕೂಡಾ ಮುಂದೆ ಬರುತ್ತಿಲ್ಲ. ಕಾಸಿಯಾ ಸಂಸ್ಥೆಯವರು ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ, ಸ್ಥಳೀಯರು ಉದ್ಯಮದತ್ತ ಆಸಕ್ತಿ ತೋರಿದರೂ ಹೊರಗಿನಿಂದ ಹೆಚ್ಚಿನ ಕೈಗಾರಿಕೆಗಳು ಜಿಲ್ಲೆಗೆ ಬರಲು ಸಾಧ್ಯವಾಗುತ್ತದೆ. ನಮ್ಮ ಯೋಜನೆಗಳು ಅಂತಾರರಾಷ್ಟ್ರೀಯ ಬೇಡಿಕೆಗೆ ತಕ್ಕಂತೆ ರೂಪುಗೊಳ್ಳಬೇಕು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯೇ ಆರ್ಥಿಕ ಬೆಳವಣಿಗೆಗೆ ದಾರಿ ಎಂದ ಅವರು, ಮುಂದಿನ ಒಂದು ವರ್ಷದ ಒಳಗಾಗಿ ಕನಿಷ್ಠ 50 ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಕಾಸಿಯಾದ ವಿಶೇಷ ಪ್ರತಿನಿಧಿ ಹಾಗೂ ಉದ್ಯಮಿ ಆನಂದ ಜಿಗಜಿನ್ನಿ ಮಾತನಾಡಿ, ಕಾಸಿಯಾದವರು ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪನೆಗೆ ಉತ್ತೇಜನ ನೀಡಲು ಮುಂದೆ ಬಂದಿದೆ. ಈ ಅವಕಾಶವನ್ನು ಯುವ ಕೈಗಾರಿಕೋದ್ಯಮಿಗಳು ಇದರ ಸದುಪಯೋಗ ಪಡೆದುಕೊಂಡು ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕಿದೆ ಎಂದರು. ಈ ಸಂದರ್ಭ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಅವರನ್ನು ಬಾಗಲಕೋಟೆ ಜಿಲ್ಲಾ ಯೂನಿಯನ್ ಆಫ್ ಮಚೆರ್ಂಟ್ ಅಸೋಶಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಾಗಾರದಲ್ಲಿ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ವಿಟಿಪಿಸಿಯ ಸಹಾಯಕ ನಿರ್ದೇಶಕ ಜಾಫರ ಖಾಸಿಂ ಅನ್ಸಾರಿ, ಜಂಟಿ ಕಾರ್ಯದರ್ಶಿ ಸತೀಶ್ ಎನ್, ಖಜಾಂಚಿ ಮಂಜುನಾಥ ಎಚ್, ಉಪ ಸಮಿತಿ ಹಾಗೂ ಬಾಗಲಕೋಟೆ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗಣ್ಣ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.