ಸಾರಾಂಶ
ಶಿರಹಟ್ಟಿ: ಗ್ರಾಮೀಣಾಭಿವೃದ್ಧಿಯೊಂದಿಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ರಿಲಾಯನ್ಸ್ ಫೌಂಡೇಶನ್ ಹಾಗೂ ಔಟ್ ರಿಚ್ ಸಂಸ್ಥೆ ಹಲವು ಕಾರ್ಯ ಯೋಜನೆ ರೂಪಿಸಿದ್ದು, ಅವುಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಗ್ರಾಮಸ್ಥರ ಸಹಕಾರ ಅವಶ್ಯ ಎಂದು ರಿಲಾಯನ್ಸ್ ಫೌಂಡೇಶನ್ ರಾಜ್ಯ ಕಾರ್ಯಕ್ರಮಗಳ ನಿರ್ವಾಹಕ ಶಿವಾನಂದ ಮಠಪತಿ ಹೇಳಿದರು.
ತಾಲೂಕಿನ ಛಬ್ಬಿ ಗ್ರಾಮದಲ್ಲಿ ಔಟ್ ರಿಚ್ ಸಂಸ್ಥೆ, ರಿಲಾಯನ್ಸ್ ಫೌಂಡೇಶನ್‌ದಿಂದ ಕೈಗೊಂಡ ಕಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದರು.ಮಹಿಳೆಯರು ಕೃಷಿಯೊಂದಿಗೆ ಜೀವನೋಪಾಯಕ್ಕಾಗಿ ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು. ಹೈನುಗಾರಿಕೆ, ಟೇಲರಿಂಗ್ ಮುಂತಾದವುಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದ ಅವರು, ಪಶು ಸಂಗೋಪನೆ ಮತ್ತು ಪಶು ಸಂಬಂಧಿತ ರೋಗಗಳು, ಕುಡಿವ ನೀರಿನ ಟ್ಯಾಂಕ್, ಹವಾಮಾನ ವೈಪರಿತ್ಯ ಮತ್ತು ಕೃಷಿ ಸಂಬಂಧಿತ ವಿಷಯಗಳು, ಸಂಸ್ಥೆಯ ಚಟುವಟಿಕೆಗಳಲ್ಲಿ ಗ್ರಾಮ ಪ್ರತಿನಿಧಿ (ಕ್ಲೈಮೇಟ್ ಚಾಂಪಿಯನ್) ಭಾಗವಹಿಸುವಿಕೆ, ಮಹಿಳೆಯರ ಭಾಗವಹಿಸುವಿಕೆ, ಸಾರ್ವಜನಿಕರು ಬೇರೆ ಬೇರೆ ಕಾರ್ಯಗಳಲ್ಲಿ ಭಾಗವಹಿಸುವಿಕೆ ಕುರಿತು ಚರ್ಚಿಸಿದರು.
ಈ ವೇಳೆ ಗ್ರಾಮದಲ್ಲಿ ಔಟ್ ರಿಚ್ ಸಂಸ್ಥೆ, ರಿಲಾಯನ್ಸ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಕುಡಿವ ನೀರಿನ ಟ್ಯಾಂಕರ್ ಹಾಗೂ ಆಯವ್ಯಯದ ವಾಲ್ ಪೇಟಿಂಗ್ ವೀಕ್ಷಿಸಿ ಮಾರ್ಗದರ್ಶನ ಮಾಡಿದರು.ರಿಲಾಯನ್ಸ್ ಫೌಂಡೇಶನ್ ಗೋವಿಂದಯ್ಯ.ಬಿ, ವಿಕ್ರಮ ನಿಂಬಾಳ, ಓಂಪ್ರಕಾಶ ಪಾಟೀಲ, ಔಟ್ ರಿಚ್ ಸಂಸ್ಥೆಯ ಸಂಯೋಜಕ ಲೋಹಿತಕುಮಾರ.ಕೆ ಸೇರಿದಂತೆ ಗ್ರಾಮಾಭಿವೃದ್ಧಿ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.