ಮಡಿಕೇರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹ

| Published : Nov 15 2024, 12:38 AM IST

ಸಾರಾಂಶ

ಸಹಕಾರ ಸಂಘಗಳು ಆರ್ಥಿಕ ಪ್ರಗತಿ ಮತ್ತಷ್ಟು ವೃದ್ಧಿಸಿಕೊಂಡು, ಕೃಷಿಕರು ಹಾಗೂ ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹದ ಧ್ವಜಾರೋಹಣ ನಂತರ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಹಕಾರ ಸಂಘಗಳು ಆರ್ಥಿಕ ಪ್ರಗತಿ ಮತ್ತಷ್ಟು ವೃದ್ಧಿಸಿಕೊಂಡು, ಕೃಷಿಕರು ಹಾಗೂ ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹದ ಧ್ವಜಾರೋಹಣ ನಂತರ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಇರಬಾರದು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದ್ದಲ್ಲಿ ಸಹಕಾರ ಸಂಘಗಳ ಬಲವರ್ಧನೆ ಸಾಧ್ಯ ಎಂದರು.

ಸಹಕಾರ ಸಂಘಗಳಿಗೆ ದೇಶದಲ್ಲಿ ತಮ್ಮದೇ ಆದ ಸ್ಥಾನವಿದ್ದು, ಸಂಪತ್ತನ್ನು ಎಲ್ಲರೂ ಹಂಚಿಕೊಂಡು ಸಮಾನವಾಗಿ ಬದುಕುವುದು ಸಹಕಾರದ ಧ್ಯೇಯೋದ್ದೇಶವಾಗಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಬಹುದಾಗಿದೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 21 ಕೇಂದ್ರ ಸಹಕಾರ ಬ್ಯಾಂಕುಗಳು ಇದ್ದು, ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕು ಅತ್ಯುತ್ತಮವಾಗಿ ಆರ್ಥಿಕ ಚಟುವಟಿಕೆ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, 71 ನೇ ಸಹಕಾರ ಸಪ್ತಾಹ ಆಚರಿಸಲಾಗುತ್ತಿದ್ದು, ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ 3 ರಿಂದ 5 ಲಕ್ಷ ರು. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ನೀಡಲಾಗುತ್ತಿದೆ ಎಂದರು.

ಸಹಕಾರ ಕಾಯ್ದೆ ತಿದ್ದುಪಡಿಯಿಂದ ಸಹಕಾರ ಸಂಘಗಳ ಬೆಳವಣಿಗೆ ಕಷ್ಟ ಸಾಧ್ಯ. ನೂತನ ಸಹಕಾರ ಕಾಯ್ದೆ ಜಾರಿಗೊಂಡಲ್ಲಿ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಹಕಾರ ಸಂಘಗಳು ಸಮರ್ಥವಾಗಿ ಬೆಳೆಯುವಲ್ಲಿ ಅವಕಾಶ ಮಾಡಬೇಕು. ಸಹಕಾರ ಸಂಘಗಳು ವಿಕೇಂದ್ರೀಕರಣ ಆಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದರೂ ಸಹ, ಸಹಕಾರಿಗಳಿಂದ ಒಂದು ಸಹಕಾರಿ ಸಂಸ್ಥೆ ಬೆಳೆಯುತ್ತದೆ ಎಂಬುದನ್ನು ಮನಗಾಣಬೇಕು. ಪಂಚಾಯತ್ ರಾಜ್ ವ್ಯವಸ್ಥೆಗೂ, ಸಹಕಾರ ಸಂಘಗಳ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ಈ ಬಗ್ಗೆ ಯೋಚಿಸಬೇಕು ಎಂದರು.

ರಾಜ್ಯಕ್ಕೆ ಮಾದರಿ:

ಕೊಡಗಿನ ಸಹಕಾರ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ. ನಬಾರ್ಡ್ ಮೂಲಕ ಬರುವ ಸಾಲ ಸೌಲಭ್ಯ ಕಡಿಮೆಯಾಗಿರುವುದರಿಂದ ಕೃಷಿಕರಿಗೆ ಸಾಲ ಸೌಲಭ್ಯ ಒದಗಿಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ನಮ್ಮ ಪಾಲು ಬಿಡುಗಡೆ ಮಾಡಬೇಕು ಎಂದರು.

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಎಂ.ಎಂ.ಶ್ಯಾಮಲ ಮಾತನಾಡಿ, ಸಹಕಾರ ಸಪ್ತಾಹದಲ್ಲಿ ಸಹಕಾರ ಸಂಘಗಳ ಪ್ರಗತಿ ಬಗ್ಗೆ ವಿಮರ್ಶೆಗಳು ನಡೆಯಬೇಕು ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್‌ಶೇಖರ್, ಶರವಣ ಕುಮಾರ್ ಟಿ.ಆರ್., ಗುಮ್ಮಟ್ಟೀರ ಎಸ್.ಕಿಲನ್ ಗಣಪತಿ, ಜಲಜಾ ಶೇಖರ್, ವೃತ್ತಿಪರ ನಿರ್ದೇಶಕ ಮುಂಡಂಡ ಸಿ.ನಾಣಯ್ಯ, ಡಿಸಿಸಿ ಬ್ಯಾಂಕಿನ ಸಿಇಒ ಪ್ರವೀಣ್ ಬಿ ನಾಯಕ್, ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ ಜಿ.ಎಂ ಇತರರು ಇದ್ದರು.