ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಸಹಕಾರ ಒಕ್ಕೂಟದಿಂದ ಗುರುವಾರ (ನ.೧೪)ದಿಂದ ನ.೨೦ರವರೆಗೆ ಜಿಲ್ಲೆಯಲ್ಲಿ ಸಹಕಾರ ಸಪ್ತಾಹ ಆಚರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.ಕಟ್ಟಡಗಳ ಮೇಲೆ ಏಳು ದಿನಗಳ ಕಾಲ ಕಡ್ಡಾಯವಾಗಿ ಸಹಕಾರ ಧ್ವಜ ಹಾರಿಸುವುದು, ವಿದ್ಯುತ್ ದೀಪಗಳಿಂದ ಅಲಂಕರಿಸಿ ಮೆರುಗು ನೀಡಬೇಕು. ಸಪ್ತಾಹದ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗೆ ಮತ್ತು ಸಹಕಾರಿಗಳಿಗೆ ಉಪಯುಕ್ತವಾಗುವಂತಹ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ವಿಷಯಕ್ಕೆ ಅನುಗುಣವಾಗಿ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.೧೪ರಂದು ಮಂಡ್ಯ, ೧೫ಕ್ಕೆ ನಾಗಮಂಗಲ, ೧೬ಕ್ಕೆ ಮದ್ದೂರಿನ ಕೆ.ಹೊನ್ನಲಗೆರೆ, ೧೭ರಂದು ಕೆ.ಆರ್.ಪೇಟೆಯ ಅಕ್ಕಿಹೆಬ್ಬಾಳು, ೧೮ಕ್ಕೆ ಮಳವಳ್ಳಿಯ ಕಂದೇಗಾಲ, ೧೯ಕ್ಕೆ ಶ್ರೀರಂಗಪಟ್ಟಣ, ೨೦ಕ್ಕೆ ಪಾಂಡವಪುರದಲ್ಲಿ ಸಪ್ತಾಹ ನಡೆಯಲಿದೆ ಎಂದರುಸಪ್ತಾಹದ ಆಚರಣೆ ವೇಳೆ ಚಿಂತನ-ಮಂಥನ ಕೂಟ ಆಯೋಜನೆ, ಸಂಘದ ಆವರಣ ಹಾಗೂ ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡುವುದು, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಜನರಲ್ಲಿ ಆಸಕ್ತಿ ಮೂಡಿಸಲು ಸಭೆ-ಸಮಾರಂಭ ಆಯೋಜನೆ, ಉಚಿತ ಆರೋಗ್ಯ ತಪಪಾಸಣೆ, ರಕ್ತದಾನ, ಗಿಡ ನೆಡುವುದು ಸ್ವಚ್ಛತಾ ಆಂದೋಲನ ಮುಂತಾದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವಂತೆ ತಿಳಿ ಸಿದರು.
ಹಿರಿಯ ಸಹಕಾರಿಗಳನ್ನು ಗೌರವಿಸಿ ಹೆಚ್ಚು ಜನರು ಸಹಕಾರ ಕ್ಷೇತ್ರದಡಿ ಬರುವಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜನಸಾಮಾನ್ಯರಲ್ಲಿ ಸಹಕಾರ ರಂಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವಂತೆ ಹೇಳಿದರು. ಗೋಷ್ಠಿಯಲ್ಲಿ ನಾಗೇಂದ್‌ರ, ಶಿವಕುಮಾರ್, ಪ್ರಮೋದ್, ಪೃಥ್ವಿರಾಜ್ ಇದ್ದರು.ಸಂಘದ ಆಡಳಿತ ಮಂಡಳಿ, ಸಿಇಒ ಕಿತ್ತಾಟ ಸರಿಪಡಿಸುವಂತೆ ಆಗ್ರಹಮಳವಳ್ಳಿ: ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸಿಇಒ ನಡುವಿನ ಆತಂರಿಕ ಕಿತ್ತಾಟವನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಂಘದ ವ್ಯಾಪ್ತಿಯ 400ಕ್ಕೂ ಹೆಚ್ಚು ರೈತರು ಬಡ್ಡಿಗೆ ಸಾಲ ಮಾಡಿ ಸಹಕಾರ ಸಂಘದ ಸಾಲವನ್ನು ತೀರಿಸಿದ್ದಾರೆ. ಈಗ ಮತ್ತೆ ಸರ್ಕಾರದ ಬಡ್ಡಿ ರಹಿತ ಸಾಲ ಪಡೆಯಲು ಅರ್ಜಿ ಸಲ್ಲಿಸಿ ಕಳೆದ ನಾಲ್ಕೈದು ತಿಂಗಳಿಂದ ಅಲೆಯುತ್ತಿದ್ದಾರೆ. ಆದರೆ, ಸಂಘದ ಆಡಳಿತ ಮಂಡಳಿ ಹಾಗೂ ಸಿಇಒ ನಡುವಿನ ಆತಂರಿಕ ಕಿತ್ತಾಟದಿಂದಾಗಿ ರೈತರ ಸಾಲ ನವೀಕರಣವಾಗದೇ ನೂರಾರು ರೈತರು ಪ್ರತಿನಿತ್ಯ ಅಲೆಯುವಂತಾಗಿದೆ ಎಂದು ದೂರಿದ್ದಾರೆ.ಈ ಬಗ್ಗೆ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ವ್ಯಾಪ್ತಿಯ ನೂರಾರು ಮಂದಿ ರೈತರು ಸರ್ಕಾರದ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡಲೇ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.