ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಕರ್ನಾಟಕ ರಾಜ್ಯ ಸಹಕಾರ ಕಾಯ್ದೆ 1959ರ ತಿದ್ದುಪಡಿ ಬಿಲ್ ಅನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ರಾಜ್ಯಪಾಲರು ಸೂಚಿಸಿದ್ದು, ನಿಯಮ ಬಾಹಿರವಾದುದು ಎನ್ನುವುದು ನನ್ನ ಭಾವನೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹುಟ್ಟೂರು ತಾಲೂಕಿನ ಕಲ್ಲಹಳ್ಳಿಯಲ್ಲಿರುವ ಅರಸು ಸಮಾಧಿಗೆ ತಮ್ಮ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ಆಗಮಿಸಿ ಗೌರವ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರ ಜನರ ಆಂದೋಲನವಾಗಬೇಕೆಂಬ ಸದುದ್ದೇಶದಿಂದ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಕರ್ನಾಟಕ ರಾಜ್ಯ ಸಹಕಕಾರ ಕಾಯ್ದೆ 1959ಕ್ಕೆ ಹಲವು ತಿದ್ದುಪಡಿಗಳನ್ನು ಮಾಡಿ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ಹಲವಾರು ವಿಷಯಗಳ ಕುರಿತು ಸ್ಪಷ್ಟೀಕರಣ ಕೋರಿ ರಾಜ್ಯಪಾಲರು 2ರಿಂದ 3 ಬಾರಿ ವಾಪಸ್ ಕಳುಹಿಸಿದ್ದರು. ಅವೆಲ್ಲವಕ್ಕೂ ಸಮಜಾಯಿಷಿ ನೀಡಿ ಮರು ಪರಿಶೀಲನೆಗೆ ಕಳುಹಿಸಲಾಗಿತ್ತು. ಇದೀಗ 2ರಿಂದ 3 ದಿನಗಳ ಹಿಂದೆ ಬಿಲ್ ಅನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಸೂಚಿಸಿದ್ದಾರೆ. ಇದು ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರಕ್ಕೆ ಸಂಬಂಧಪಟ್ಟ ತಿದ್ದುಪಡಿ ಬಿಲ್ ಆಗಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಅಗತ್ಯವೇನಿರಲಿಲ್ಲ. ರಾಜ್ಯಪಾಲರ ಈ ನಡೆ ನಿಯಮಬಾಹಿರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ತಿದ್ದುಪಡಿ ಬಿಲ್‌ನಲ್ಲಿ ಸರ್ಕಾರದಿಂದ ಅನುಕೂಲಗಳನ್ನು ಪಡೆಯುತ್ತಿರುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಎಸ್‌ಸಿ, ಎಸ್ಟಿ ಸಮುದಾಯದವರನ್ನು ಗುರುತಿಸಿ ನಾಮನಿರ್ದೇಶಕರನ್ನಾಗಿಸಿ ಅವರಿಗೆ ಮತ ನೀಡುವ ಅಧಿಕಾರ ನೀಡಲಾಗಿದೆ. ಈ ಕುರಿತು ರಾಜ್ಯಪಾಲರು ಆಕ್ಷೇಪಿಸಿ ಇದು ಆಡಳಿತ ಮಂಡಳಿಯ ಸೂತ್ರ (ಫಾರ್ಮುಲಾ)ಗಳನ್ನು ಬದಲಾಯಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರನ್ನು ಸುಮ್ಮನೆ ಕುಳಿತುಕೊಳ್ಳಲು ಕಳುಹಿಸಬೇಕೇ? ಎಲ್ಲರನ್ನು ಒಳಗೊಂಡು ಸಹಕಾರ ಕ್ಷೇತ್ರ ಮುನ್ನಡೆಯಬೇಕಿದೆ ಎಂದರು.ಮುಂಬರುವ ದಿನಗಳಲ್ಲಿ ಚುನಾವಣಾ ರಾಜಕೀಯದಿಂದ ದೂರ ಉಳಿಯಬೇಕೆಂದು ನಿರ್ಧರಿಸಿದ್ದೇನೆ, 45 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದೇನೆ. ಈ ಹಿಂದಿನ ಶಕ್ತಿ ಈಗ ಇಲ್ಲ. ವಯೋಸಹಜ ಹಲವು ಸಮಸ್ಯೆಗಳು ನಮಗೆ ಅರಿವಾಗುತ್ತಿದೆ. ಅಲ್ಲದೇ, ಯುವಕರು, ಹೊಸಮುಖಗಳು ರಾಜಕಾರಣಕ್ಕೆ ಬರಬೇಕಿದ್ದು, ಅವರಿಗೆ ನಾವು ಅವಕಾಶ ಮಾಡಿಕೊಡಬೇಕಿದೆ. ಸಹಕಾರ ಕ್ಷೇತ್ರದಲ್ಲಿ ಮತ್ತು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಚುನಾವಣಾ ರಾಜಕಾರಣದಿಂದ ಮಾತ್ರ ದೂರವುಳಿಯಲು ನಿರ್ಧರಿಸಿದ್ದೇನೆ ಎಂದರು.
ಹುಣಸೂರು ತಾಲೂಕಿನ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾ ದಿನಾಂಕ ಘೋಷಿಸಿದ ಚುನಾವಣಾಧಿಕಾರಿಯೇ ಚುನಾವಣೆ ದಿನಾಂಕದಂದು ಗೈರಾಗಿದ್ದಾರೆ. ಇದು ಸರಿಯೇ?, ಅಧಿಕಾರಿಗಳ ಈ ನಡವಳಿಕೆ ಪ್ರಜಾಪ್ರಭುತ್ವ ವಿರೋಧಿಯಲ್ಲವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಈ ಕುರಿತು ತಮಗೂ ಮಾಹಿತಿ ಬಂದಿದೆ. ಇಂತಹ ನಡೆಯನ್ನು ಸಹಿಸುವುದಿಲ್ಲ. ತಾವು ಸಹಕಾರ ಸಚಿವರಾದ ಮೇಲೆ ರಾಜ್ಯಾದ್ಯಂತ ಕರ್ತವ್ಯಲೋಪದ ಆರೋಪ ಹೊತ್ತಿದ್ದ 20ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ತನಿಖೆ ನಡೆಸಿದ್ದೇವೆ. ಶಿಕ್ಷೆಯೂ ಆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂತಹ ಕೆಲವೊಂದು ಬ್ಲಾಕ್ ಶೀಪ್ ಗಳಿರುವುದು ಸಹಜ. ಆದರೆ, ಅದೆಲ್ಲವನ್ನು ಸರಿಪಡಿಸಿ ಮುಂದುವರಿಯುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು.ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್, ತಾಲೂಕು ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು, ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು. ಪಟ್ಟಣದ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಚಿವರು ಕಲ್ಲಹಳ್ಳಿಗೆ ತೆರಳಿ ಅರಸು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.