ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಒಂದು ಸಂಸ್ಥೆಯನ್ನು ಪ್ರಾರಂಭ ಮಾಡುವುದು ಸುಲಭ. ಆದರೆ ಅದೇ ಸಂಸ್ಥೆ 100 ವರ್ಷಗಳ ಕಾಲ ಗ್ರಾಹಕರ ಸೇವೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಿರುವುದು ಮಹತ್ವದ್ದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.ನಗರದ ಹೆಗ್ಗೆರೆಯಲ್ಲಿರುವ ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವೈಶ್ಯ ಕೋ-ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
100 ವರ್ಷಗಳ ಹಿಂದೆ ಪ್ರಾರಂಭವಾದ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಜಿಲ್ಲೆಯ ವಾಣಿಜ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಹಕರು ಬ್ಯಾಂಕಿನೊಂದಿಗೆ ಹೆಚ್ಚಿನ ಸಂಬಂಧ ಹೊಂದಿ, ತಾವು ಬೆಳೆಯುವುದರ ಜೊತೆಗೆ, ಬ್ಯಾಂಕ್‌ನ್ನು ಬೆಳೆಸಿದ್ದಾರೆ ಎಂದರು.ಸದ್ಯ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿಯೂ ಹಣದ ಅರಿವು ಇದೆ. ಆದರೆ ಸಾಲ ಸೌಲಭ್ಯ ಒದಗಿಸಲು ಉತ್ತಮ ಗ್ರಾಹಕರ ಕೊರತೆ ಇದೆ. ಹಣಕಾಸು ಸಂಸ್ಥೆಗಳು ಹೆಚ್ಚಾದಂತೆ ಗ್ರಾಹಕರಿಗೆ ಆಯ್ಕೆಗೆ ಹೆಚ್ಚಿನ ಅವಕಾಶಗಳಿವೆ. ಅತೀ ಕಡಿಮೆ ಬಡ್ಡಿಗೆ ಯಾರು ಸಾಲ ಸೌಲಭ್ಯ ನೀಡುವ ಸಂಸ್ಥೆಗಳನ್ನು ಅವರು ಆಯ್ಕೆ ಮಾಡುತ್ತಾರೆ. ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯದ ನಂತರ ಸಹಕಾರಿ ಬ್ಯಾಂಕುಗಳ ಡಿಪಾಸಿಟ್ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಆದರೆ ಸೌಹಾರ್ದ ಸಹಕಾರಿ ಸಂಘಗಳ ಕಾರ್ಯ ವೈಖರಿ ಚೆನ್ನಾಗಿಲ್ಲ. ಸುಮಾರು 45ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಗ್ರಾಹಕರು ಇಟ್ಟಿದ್ದ ಡಿಫಾಸಿಟ್ ಹಣ ಕೊಡಲು ಹಣವಿಲ್ಲದಂತಾಗಿದೆ. ಅನಾರೋಗ್ಯಕರ ಪೈಪೋಟಿಯಿಂದ ಸುಮಾರು 2650 ಕೋಟಿ ರು. ಅವ್ಯವಹಾರ ನಡೆದಿದೆ. ಗ್ರಾಹಕರ ಶೋಷಣೆ ತಪ್ಪಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಕೃಷಿ ಮತ್ತು ಕೃಷಿಯೇತನ ಬ್ಯಾಂಕುಗಳ ನಿರ್ವಹಣೆ ಆರ್.ಬಿ.ಐ ದಾಗಿದೆ. ಅಲ್ಲಿಂದ ಆಗಿಂದಾಗ್ಗೆ ಬರುವ ಸುತ್ತೊಲೆಗಳನ್ನು ನೋಡಿದರೆ ಬ್ಯಾಂಕುಗಳನ್ನು ನಡೆಸಲು ಸಾಧ್ಯವೇ ಇಲ್ಲ. ಸಿಎಂಎ ನಿಯಮ ಪಾಲಿಸಿದರೆ ಯಾವ ರೈತರಿಗೂ ಸಾಲ ನೀಡಲು ಸಾಧ್ಯವಿಲ್ಲ ಎಂದರು.ರಾಜಕೀಯವಾಗಿ ನಾನು ಮಧುಗಿರಿಯಲ್ಲಿದ್ದರೂ, ನನ್ನ ಕರ್ಮ ಭೂಮಿ ತುಮಕೂರು.ಹಿಂದುಳಿದ ಸಮುದಾಯಗಳು ನನ್ನ ಕೈ ಹಿಡಿದು ನಡೆಸಿವೆ.1994ರಲ್ಲಿ ನಾನು ತುಮಕೂರು ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಎಲ್ಲ ಹಿಂದುಳಿದ, ಮುಂದುವರೆದ ಸಮಾಜಗಳು ಕೈಹಿಡಿದು ಸುಮಾರು 27ಸಾವಿರ ಮತಗಳು ಪಡೆಯಲು ಸಾಧ್ಯವಾಯಿತು.ಅನಂತರಾಮಶೆಟ್ಟರು ಅಂದಿಗೆ ಸುಮಾರು 500 ಜನರ ಪಟ್ಟಿ ನೀಡಿ, ಮತ ಹಾಕಿಸುವ ಭರವಸೆ ನೀಡಿದ್ದರು ಎಂದು ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನೆದರು.
ಗ್ರಾಹಕರಲ್ಲಿ ನಿರ್ಲಕ್ಷ ಮನೋಭಾವ ಬೇಡ.ಸಾಲ ಮತ್ತು ಬಡ್ಡಿಯನ್ನು ಸಕಾಲಕ್ಕೆ ಕಟ್ಟುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೊಸೈಟಿಗಳ ಮೂಲಕ ನೀಡುವ ಸಾಲ ಸರಕಾರದ ಹಣವಲ್ಲ.ಅದು ಗ್ರಾಹಕರು ನೀಡಿರುವ ಡಿಪಾಸಿಟ್ ಹಣ, ಸಾಲ ತೀರಿಸಲು ಕ್ರಮ ಕೈಗೊಳ್ಳಬಾರದು ಎಂದು ಹೇಳುತ್ತವೆ. ಆದರೆ ಹಣಕಾಸಿನ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಒಳ್ಳೆಯದಲ್ಲ. ಇಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗಲಿದೆ. ಇಡೀ ಸಹಕಾರ ಆಂದೋಲನವೇ ಬುಡ ಮೇಲಾಗುತ್ತದೆ. ಸರಕಾರ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು, ಮಾರಕವಾಗಬಾರದು ಎಂದು ಮಾರ್ಮಿಕವಾಗಿ ನುಡಿದರು.ಶಾಸಕ ಜಿ.ಬಿ.ಜೋತಿ ಗಣೇಶ್ ಮಾತನಾಡಿ, ಸಿಐಟಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಯೇ ಹಿಂದೆ ವೀರಶೈವ ಸಹಕಾರಿ ಬ್ಯಾಂಕ್ ಹಾಗೂ ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಸಹಕಾರ ಇದೆ. ಇವರನ್ನು ಸ್ಮರಿಸುತ್ತೇನೆ. ಕಳೆದ 10 ವರ್ಷಗಳಿಂದ ಗೋವಿಂದರಾಜು ಮತ್ತು ರಾಮಮೂರ್ತಿ ಅವರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣದಾಗಿ ಆರಂಭವಾಗಿ ಸದ್ಯ ಬೃಹದಾಕಾರವಾಗಿ ಬೆಳೆದಿರುವ ಬ್ಯಾಂಕಿನ ಹಿಂದಿನ ಹಲವರ ಶ್ರಮವಿದೆ. ಅವರೆಲ್ಲರಿಗೂ ಹೃಪೂರ್ವಕ ಧನ್ಯವಾದ ಗಳನ್ನು ತಿಳಿಸುತ್ತೇನೆ. ಮತ್ತಷ್ಟು ಗ್ರಾಹಕರ ಸೇವೆಯಲ್ಲಿ ತೊಡಗಲಿ ಎಂದು ಶುಭ ಹಾರೈಸಿದರು.
ವಿಧಾನಪರಿಷತ್ ಸದಸ್ಯ ಅರುಣ್‌ಕುಮಾರ್ ಮಾತನಾಡಿ,ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಬ್ಯಾಂಕಿನ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಸುಧೈವ, ವೈಶ್ಯ ಸಮಾಜ ಸಣ್ಣ ಸಮಾಜ. ಕರ್ನಾಟಕದಲ್ಲಿ ಸುಮಾರು 95 ಬ್ಯಾಂಕುಗಳು ಕಾರ್ಯನಿರ್ವಹಿಸುತ್ತೀವೆ.ಎಲ್ಲ ಬ್ಯಾಂಕುಗಳ ಎನ್.ಪಿ.ಎ.ಕಡಿಮೆ ಇದೆ.ಹಣಕಾಸು ವ್ಯವಹಾರದಲ್ಲಿ ನಮ್ಮದು ಎತ್ತಿದ ಕೈ.ಹಾಗಾಗಿ ನಮ್ಮ ಮುಂದೆ ಹಲವಾರು ಸವಾಲುಗಳಿವೆ.ಅವುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಸರಕಾರ ಹೊಸದಾಗಿ ಜಾರಿಗೆ ತಂದ ಕೋ-ಅಪರೇಟಿವ್ ಬಿಲ್‌ಗೆ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದು ನಾನು.ಕೆಲವೊಂದು ಷರತ್ತುಗಳು ಬೇಡ ಎಂಬುದು ನಮ್ಮ ವಾದವಾಗಿದೆ ಎಂದರು.ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಎ.ವಿ. ನಂಜುಂಡರು ಈ ಬ್ಯಾಂಕ್ ಆರಂಭಿಸಿದರು. ಅವರ ಮೊಮ್ಮಗನಾದ ನಾನು ಸದ್ಯ ಶತಮಾನೋತ್ಸವ ಸಮಾರಂಭದ ಅಧ್ಯಕ್ಷನಾಗಿರುವುದು ಸಂತೋಷದ ವಿಚಾರವಾಗಿದೆ. ಸುಮಾರು 8 ಶಾಖೆಗಳನ್ನು ಹೊಂದಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಶಾಖೆಗಳನ್ನು ಹೊಂದಿದೆ. 25 ವರ್ಷಗಳ ಹಿಂದೆಯೇ ಟೆಲಿ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದ್ದು, ಕೋರ್ ಬ್ಯಾಂಕಿಂಗ್ ಆಗಿ ಕೆಲಸ ನಿರ್ವಹಿಸುತ್ತಿದೆ. ವೈಶ್ಯ ಜನಾಂಗದ ಹಣಕಾಸು ಸಂಸ್ಥೆಗಳಲ್ಲಿಯೇ ಮುಂಚೂಣಿಯಲ್ಲಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.
ಬ್ಯಾಂಕಿನ ಬೆಳವಣಿಗೆಗೆ ಸಹಕರಿಸಿದ ಹಿರಿಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ನಂತರ ಸಂಜೆ ಸುಗಮ ಸಂಗೀತ ಕಾರ್ಯಕ್ರಮ ಜರುಗಿತ್ತು.ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ.ಅರ್.ಎಲ್. ರಮೇಶ್‌ಬಾಬು, ವೈಶ್ಯಕೋ-ಅಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ರಾಮಮೂರ್ತಿ, ಸಿಇಒ ಸುಮ, ನಿರ್ದೇಶಕರು ಉಪಸ್ಥಿತರಿದ್ದರು.