ಕನ್ನಡಪ್ರಭ ವಾರ್ತೆ ವಿಜಯಪುರ
ಸಹಕಾರಿ ಬ್ಯಾಂಕುಗಳು ರೈತರಿಗೆ ಸಂಕಷ್ಟ ದಿನಗಳಲ್ಲಿ ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಬೃಹತ್ ಕಟ್ಟಡದ ಗೋದಾಮು ಉದ್ಘಾಟಿಸಿ ಮಾತನಾಡಿದ ಅವರು, ಈಗ ಕೃಷಿ ಕ್ಷೇತ್ರ ಕಷ್ಟಕರವಾಗಿದ್ದು, ಆಲಮಟ್ಟಿ ಜಲಾಶಯ ಎತ್ತರ 524.256 ಮೀ. ಪೂರ್ಣವಾದರೆ ರೈತರ ಗೋಳು ನೀಗಲಿದೆ. ಸದ್ಯ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿ ಸೋತಿದ್ದಾರೆ. ಇಂಥ ಸಂದರ್ಭದಲ್ಲಿ ಸಹಕಾರ ಸಂಘಗಳು ರೈತರಿಗೆ ಬಹಳಷ್ಟು ನೆರವು ಒದಗಿಸುತ್ತಿವೆ ಎಂದರು.
70 ಸಾವಿರ ಎಕರೆ ಭೂಮಿ ಮುಳುಗಡೆಯಾಗಿದ್ದು, 20 ಹಳ್ಳಿಗಳು ಸ್ಥಳಾಂತರವಾಗಬೇಕಿದೆ. ಇಲ್ಲಿ ಸಹಕಾರಿ ಸಂಘದ ಕಟ್ಟಡ ನಿರ್ಮಾಣವಾಗಿದ್ದು, ಸಾಲ ತೆಗೆದುಕೊಂಡವರು ಪ್ರಾಮಾಣಿಕವಾಗಿರಬೇಕು. ಶಿವಾನಂದ ಪಾಟೀಲರು ದಕ್ಷತೆಯಿಂದ ಡಿಸಿಸಿ ಬ್ಯಾಂಕ್ ಮುನ್ನಡೆಸಿ ಜಿಲ್ಲೆಯಲ್ಲಿ ತೊಂಬತ್ತರ ದಶಕದಿಂದಲೂ ಸಹಕಾರಿ ಕ್ಷೇತ್ರ ಬಲಪಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಸಹಕಾರಿ ಚಳುವಳಿ ಈ ದೇಶಕ್ಕೆ ಸಂಜೀವಿನಿಯಾಗಿದ್ದು, ಇದು ಜಾತ್ಯಾತೀತ, ಪಕ್ಷಾತೀತವಾಗಿದೆ. ಕಡಿಗನಾಳ ಸಿದ್ಧನಗೌಡ ಧಾರವಾಡದಲ್ಲಿ ಸಹಕಾರಿ ಬಲ ತುಂಬಿದರೆ, ಅದು ಈ ಭಾಗದ ಬಿ.ಟಿ.ಪಾಟೀಲ ಅವರಿಂದ ಜಿಲ್ಲೆಯಲ್ಲಿ ಬೆಳೆದು ನಿಂತಿದೆ. ಒಟ್ಟು 272 ಸಹಕಾರಿ ಸಂಘಗಳ ಪೈಕಿ ಇನ್ನು ಕೇವಲ 20 ಸಂಘಗಳ ಕಟ್ಟಡವಾದರೆ ಶೇ.100 ರಷ್ಟು ಕಟ್ಟಡ ಹೊಂದಿದಂತಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ರೈತರಿಗೆ ₹ 80 ಸಾವಿರ ನೀಡಲಾಗುತ್ತಿದ್ದು, ಇದು ರಾಜ್ಯದಲ್ಲಿಯೇ ಅತೀ ಹೆಚ್ಚು. ಡಿಸಿಸಿ ಬ್ಯಾಂಕ್ ಇಂದು ₹ 6000 ಕೋಟಿ ವ್ಯವಹಾರ ನಡೆಸುತ್ತಿದ್ದು, ಇದು ದಾಖಲೆಯಾಗಿದೆ. ಕೇಂದ್ರ ಸರ್ಕಾರ ರೈತರ ಪರವಾಗಿಲ್ಲ, ಅದರ ನೀತಿಗಳಿಂದ ನಬಾರ್ಡ್ ಕೂಡ ಸಾಲ ನೀಡದ ಸ್ಥಿತಿ ಎದುರಾಗಿದೆ. ಹೊಲದಲ್ಲಿ ಮನೆ ಕಟ್ಟಿದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲರು ಜಿಲ್ಲೆಯ ಅಭಿವೃದ್ಧಿ ಪಥದ ಜೋಡೆತ್ತುಗಳು. ಒಬ್ಬರು ನೀರಾವರಿ, ಇನ್ನೊಬ್ಬರು ಸಹಕಾರಿ. ಇವರಿಬ್ಬರಿಂದ ಮುಂದೆಯೂ ಜಿಲ್ಲೆ ಇನ್ನಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಡಿ.ಪಡಸಲಗಿ ಸ್ವಾಗತಿಸಿದರು. ಬಬಲಾದಿ ಸದಾಶಿವಯ್ಯ ಕಣಬೂರಿನ ರಾಚಯ್ಯ ಪೂಜಾರಿ ಸಾನಿಧ್ಯ ವಹಿಸಿದ್ದರು. ಸಹಕಾರಿ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಜಿಲ್ಲಾ ಪ್ರಬಂಧಕ ವಿಕಾಸ ರಾಠೋಡ, ಡಿಸಿಸಿ ಸಿಇಒ ಎಸ್.ಎ.ಢವಳಗಿ, ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ, ತರಬೇತಿ ಸಂಯೋಜಕ ಆರ್.ಎಂ.ಬಣಗಾರ ಉಪಸ್ಥಿತರಿದ್ದರು.--
ಕೋಟ್‌ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ₹10 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿಯ ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ. ಆದರೆ, ರೈತರ ಕೇವಲ ₹ 2 ಲಕ್ಷ ಕೋಟ ಸಾಲ ಮನ್ನಾ ಮಾಡುತ್ತಿಲ್ಲ. ಮನಮೋಹನಸಿಂಗ್ ಅವರೊಬ್ಬರೇ ಈ ದೇಶದಲ್ಲಿ ಸಾಲ ಮನ್ನಾ ಮಾಡಿದ್ದರು. ಕಷ್ಟದಲ್ಲಿರುವ ಇಲ್ಲಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಾನು ಮತ್ತು ಶಾಸಕ ಶಿವಾನಂದ ಪಾಟೀಲ, ಸಚಿವ ಲಕ್ಷ್ಮಣ ಸವದಿ ಅವರೆಲ್ಲ ಸೇರಿ ಉಳಿಸಿಕೊಳ್ಳುತ್ತೇವೆ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ