ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ರೈತರ ಆರ್ಥಿಕ ಸದೃಢತೆಗೆ ಪ್ರಮುಖ ಆಧಾರವಾಗಿದ್ದು, ವಿವಿಧ ಸಾಲ ಸೌಲಭ್ಯಗಳಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹೇಳಿದರು.

ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಕೃಷಿ ಯಂತ್ರೋಪಕರಣಗಳ ಖರೀದಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅಗತ್ಯ ಆರ್ಥಿಕ ನೆರವು ಒದಗಿಸುತ್ತಿವೆ. ಇದರಿಂದ ರೈತರು ಖಾಸಗಿ ಸಾಲದ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ನ ಸದಸ್ಯತ್ವ ಪಡೆದು ಅದರ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬ್ಯಾಂಕಿನ ನಿರ್ದೇಶಕ ಜೆ ಶಿವಪ್ರಕಾಶ್ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾಗಿತ್ತು. ಕೆಂಗಲ್ ಹನುಮಂತಯ್ಯ ನವರು ಈ ಒಂದು ಸಂಘಕ್ಕೆ ಅಡಿಪಾಯವನ್ನು ಹಾಕಿದ್ದಾರೆ. ಜೊತೆಗೆ ರೈತರಿಗೆ ಅನುಕೂಲವಾಗಬೇಕೆನ್ನುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ರೈತರ ದೂರದೃಷ್ಟಿಯನ್ನು ಇಟ್ಟುಕೊಂಡು ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಲಾಭಾಂಶದಿಂದಲೇ ರೈತರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಾಗುತ್ತಿದೆ ಎಂದರಕು.


ಬ್ಯಾಂಕಿನ ಆಡಳಿತ ಅಧಿಕಾರಿಗಳು ಸಂಪೂರ್ಣ ಬೆಂಬಲದೊಂದಿಗೆ ಚಿತ್ರದುರ್ಗ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು, ಉತ್ತಮ ಲಾಭಾಂಶದಲ್ಲಿ ಮುಂದೆ ಸಾಗುತ್ತಿದೆ. ರೈತರಿಗೆ ಬೇರೆ ಬೇರೆ ರೂಪದಲ್ಲಿ ಅನಕೂಲ ಆಗುತ್ತಿದೆ ಎಂದು ತಿಳಿಸಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಪಿ.ಜೆ ಶಿವಪ್ರಸಾದ್, ಉಪಾಧ್ಯಕ್ಷ ಎಂ.ಎಸ್ ಶರಣಪ್ಪ, ನಿರ್ದೇಶಕರಾದ ರವಿ, ಜಗದೀಶ್, ವಿಜಯಕುಮಾರ್, ಸತೀಶ್, ಮಾರುತಿ, ಮೌನೇಶ್, ಕೊಟ್ರೇಶ್, ಪದ್ಮ, ವನಜಾಕ್ಷಮ್ಮ, ಸುನಿಲ್ ನಾಗಪ್ಪ ಹಾಗೂ ಸರ್ಕಾರಿ ನಾಮ ನಿರ್ದೇಶಕರಾದ ನಿರಂಜನ ಮೂರ್ತಿ ಇದ್ದರು.