ಸಹಕಾರಿ ಕ್ಷೇತ್ರ ಪಾರದರ್ಶಕತೆ ಅಳವಡಿಸಿಕೊಳ್ಳಲಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

| Published : Apr 23 2025, 12:37 AM IST

ಸಹಕಾರಿ ಕ್ಷೇತ್ರ ಪಾರದರ್ಶಕತೆ ಅಳವಡಿಸಿಕೊಳ್ಳಲಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತ್ರಿಭುವನ್ ವಿಶ್ವವಿದ್ಯಾಲಯದ ಮೂಲಕ ಸಹಕಾರಿ ಕ್ಷೇತ್ರದ ಮಾಹಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಯಲ್ಲಾಪುರ: ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಮಾದರಿಯಾಗಿದೆ. ಸಹಕಾರಿ ಕ್ಷೇತ್ರಕ್ಕಿರುವ ಮಹತ್ವವನ್ನು ಅರಿತುಕೊಳ್ಳಬೇಕು. ಸಹಕಾರಿ ಕ್ಷೇತ್ರಗಳು ರಾಜಕೀಯದಿಂದ ದೂರವಿದ್ದು, ಪಾರದರ್ಶಕತೆ ಅಳವಡಿಸಿಕೊಂಡಾಗ ಹೆಚ್ಚಿನ ಸಾಧನೆ ಸಾಧ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ರಜತ ಮಹೋತ್ಸವದ ೧೯ ಹಿರಿಯ ಸಹಕಾರಿ ಮತ್ತು ಸಾಧಕರನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು.

ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತ್ರಿಭುವನ್ ವಿಶ್ವವಿದ್ಯಾಲಯದ ಮೂಲಕ ಸಹಕಾರಿ ಕ್ಷೇತ್ರದ ಮಾಹಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಲೆನಾಡು ಸಹಕಾರಿ ಸಂಘ ಜಿಲ್ಲೆಯಲ್ಲಿ ಮಾದರಿಯಾಗಿದೆ. ರೈತರಿಗೆ ಯಾಂತ್ರೀಕರಣ ಸೌಲಭ್ಯ ನೀಡುವ ಮೂಲಕ ಈ ಸಹಕಾರಿ ಸಂಘ ರೈತರ ಆಪ್ತ ಸಂಸ್ಥೆಯಾಗಿದೆ. ರೈತರ ಪರವಾಗಿ ರಾಜ್ಯ ಸರ್ಕಾರ ಕೇಳಿದ ಸವಲತ್ತನ್ನು ಕೇಂದ್ರದಿಂದ ಕೊಡಿಸುವುದಕ್ಕೆ ಬದ್ಧನಿದ್ದೇನೆ. ಅಡಿಕೆ ಬೆಳೆಗಾರರ ಬಗ್ಗೆ ಮೋದಿ ದೃಢ ನಿಲುವು ತೋಟಿಗರಿಗೆ ವರದಾನವಾಗಿದೆ. ಮಳೆ ಮಾಪನ ಯಂತ್ರದ ದೋಷದಿಂದ ವಿಮಾ ಹಣ ನೀಡಲು ತೊಂದರೆಯಾಗಿದೆ. ರಾಜ್ಯ ಸರ್ಕಾರ ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕೇವಲ ರಾಜ್ಯ, ಕೇಂದ್ರದ ಮೇಲೆ ಗೂಬೆ ಕೂರಿಸುತ್ತ ನಾವು ಮುನ್ನಡೆದರೆ ರೈತರಿಗೆ ನ್ಯಾಯ ಸಿಗದು. ಜಿಲ್ಲೆಯ ರೈತರಿಗೆ ವಿಮೆ ಬಾರದಿರುವುದು ಸ್ಪಷ್ಟ. ಇದು ತಾಂತ್ರಿಕ ಕಾರಣದಿಂದಾಗಲೀ ಅಥವಾ ಯಾವುದೇ ಕಾರಣದಿಂದಾಗಲಿ ಬಾರದಿರುವ ಕುರಿತು ನ್ಯಾಯಾಲಯಕ್ಕೆ ಹೋಗುವುದಕ್ಕೆ ಕೆಡಿಸಿಸಿ ಬ್ಯಾಂಕಿನಿಂದ ನ್ಯಾಯಾಲಯದ ಸಂಪೂರ್ಣ ವೆಚ್ಚವನ್ನು ಭರಿಸುತ್ತೇವೆ. ಮಳೆಮಾಪನದ ಸಂಪೂರ್ಣ ಕಾರ್ಯ ಮಾಡುವುದು ಮಹತ್ವದ್ದಾಗಿದೆ ಎಂದರು.

ಮಲೆನಾಡು ಕೃಷಿ ಸಹಕಾರಿ ಸಂಘ ರೈತರ ಬೆನ್ನೆಲುಬಾಗಿ ನಿಂತಿದೆ. ಇದು ಇನ್ನು ಉತ್ತಮ ಸಾಧನೆ ಮಾಡಿ, ತಾಲೂಕಿನ ರೈತರ ಅಭಿವೃದ್ಧಿಗೆ ಸಹಕಾರ ನೀಡುವಂತಾಗಲಿ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿದರು. ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ ಇದ್ದರು. ಸನ್ಮಾನಿತರಾದ ಟಿ.ಎಸ್.ಎಸ್.ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉಮ್ಮಚಗಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಮಾತನಾಡಿದರು.

ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಶಿಕುಂಬ್ರಿ, ಹಾಸಣಗಿಯ ಆರ್.ಎನ್.ಹೆಗಡೆ ಗೋರ್ಸಗದ್ದೆ, ಮಾವಿನಮನೆಯ ಸುಬ್ಬಣ್ಣ ಬೋಳ್ಮನೆ, ಭರತನಹಳ್ಳಿ ಹೇರಭ ಹೆಗಡೆ, ವಜ್ರಳ್ಳಿಯ ದತ್ತಾತ್ರೇಯ ಭಟ್ಟ, ಕಳಚೆಯ ಉಮೇಶ ಭಾಗ್ವತ, ಹಿತ್ಲಳ್ಳಿಯ ಗಣಪತಿ ಹೆಗಡೆ, ನಾಗರಾಜ ಕವಡಿಕೆರೆ, ಇಡಗುಂದಿಯ ನಾರಾಯಣ ಭಟ್ಟ ಬಟ್ಲಗುಂಡಿ, ಜೊಯಿಡಾದ ಆರ್.ಡಿ.ದಾನಗೇರಿ, ಜೋಯಿಡಾ ಪ್ರಧಾನಿಯ ಕೃಷ್ಣ ದೇಸಾಯಿ, ರಾಮನಗುಳಿಯ ಗೋಪಾಲಕೃಷ್ಣ ವೈದ್ಯ, ಹೆಗ್ಗಾರಿನ ಶಿವರಾಮ ಭಟ್ಟ ಗುಡ್ಡೆಮನೆ, ಹಿಲಲೂರಿನ ಬಾಬಣ್ಣ ಸುಕೇಂರಿ, ಲೆಕ್ಕ ಪರಿಶೋಧಕರಾದ ಸುಬ್ರಹ್ಮಣ್ಯ ಹೆಗಡೆ, ವಿಘ್ನೇಶ್ವರ ಗಾಂವ್ಕರ, ಕೃಷಿ ತಾಂತ್ರಿಕ ಸಲಹೆಗಾರ ಡಾ.ರವಿ ಭಟ್ಟ ಬರಗದ್ದೆ, ಸಣ್ಣಪ್ಪ ಭಾಗ್ವತ, ವಿನೋದ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ರವಿ ಹುಳ್ಸೆ ಸ್ವಾಗತಿಸಿದರು. ರವಿ ಗೌಡ ವಂದಿಸಿದರು.