ಸಮಾಜದ ಆಸ್ತಿಯಾದ ಸಹಕಾರಿ ಸಂಘಗಳು ಸದೃಢಗೊಳ್ಳಲಿಳ ಶಿವಸಿದ್ದೇಶ್ವರ ಸ್ವಾಮೀಜಿ

| Published : Nov 23 2025, 03:30 AM IST

ಸಮಾಜದ ಆಸ್ತಿಯಾದ ಸಹಕಾರಿ ಸಂಘಗಳು ಸದೃಢಗೊಳ್ಳಲಿಳ ಶಿವಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿಯ ಜೈನ ಮಂದಿರ ಬಳಿಯಲ್ಲಿ ಶನಿವಾರ ೪ ಸ್ಕೈರ್ ಸಮೂಹ ಸಂಸ್ಥೆಗಳ ೧೫ನೇ ವಾರ್ಷಿಕೋತ್ಸವ ಹಾಗೂ ೪ ಸ್ಕೈರ್ ಸೌಹಾರ್ದ ಸಹಕಾರಿ ಸಂಘವನ್ನು ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಶಿವಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ನೆರವು ಕಲ್ಪಿಸುವತ್ತ ಸಹಕಾರಿ ಸಂಘಗಳು ಮೊದಲು ಆರ್ಥಿಕವಾಗಿ ಬಲಾಢ್ಯವಾಗಬೇಕು. ದೇಗುಲ, ಮಠಗಳು, ಶಾಲೆ ಕಾಲೇಜುಗಳಂತೆಯೇ ಸಹಕಾರಿ ಸಂಘಗಳೂ ಕೂಡ ಸಮಾಜದ ಆಸ್ತಿಯಾಗಿವೆ ಎಂದು ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ರಬಕವಿಯ ಜೈನ ಮಂದಿರ ಬಳಿಯಲ್ಲಿ ಶನಿವಾರ ೪ ಸ್ಕೈರ್ ಸಮೂಹ ಸಂಸ್ಥೆಗಳ ೧೫ನೇ ವಾರ್ಷಿಕೋತ್ಸವ ಹಾಗೂ ೪ ಸ್ಕೈರ್ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸುರಕ್ಷತೆ, ಹೈಟೆಕ್ ಸೆಲ್ಯೂಶನ್, ಸಾವಯವ ಕೈಗಾರಿಕೆ, ಆರ್‌ಬಿ ಎಂಟರ್‌ಪ್ರೈಸಿಸ್ ಮೂಲಕ ಒಂದುವರೆ ದಶಕ ಸೇವೆ ಸಲ್ಲಿಸಿ ಇದೀಗ ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟ ಸಂಸ್ಥೆಯ ಆಡಳಿತಗಾರರು, ಹಣಕಾಸು ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಶುದ್ಧಹಸ್ತತೆ ಉಳಿಸಕೊಂಡು, ಸಿಬ್ಬಂದಿ ಗ್ರಾಹಕರೊಡನೆ ಸೌಜನ್ಯಯುತವಾಗಿ ವರ್ತಿಸುವಂತೆ ನೋಡಿಕೊಂಡಲ್ಲಿ ಸಂಸ್ಥೆ ಹೆಮ್ಮರವಾಗಿ ಬೆಳೆಯುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರನ್ನೂ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾಣಿಕೆ ನೀಡಿದಂತಾಗುತ್ತದೆಂದರು.

ಹಾವೇರಿಯ ಸದಾಶಿವ ಸ್ವಾಮೀಜಿ ಮಾತನಾಡಿ, ತ್ರಿವಿಧ ದಾಸೋಹ ನಡೆಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಡಾ.ಶಿವಕುಮಾರ ಶ್ರೀಗಳ ಪರಂಪರೆ ಮುಂದುವರಿಸಿರುವ ಶಿವಸಿದ್ದೇಶ್ವರ ಶ್ರೀಗಳು ಮೊದಲ ಬಾರಿಗೆ ಅವಳಿ ನಗರಕ್ಕೆ ಪುಣ್ಯಪಾದಾರ್ಪಣೆ ಮಾಡಿರುವುದು ನಿಮ್ಮೆಲ್ಲರಿಗೂ ಶುಭಕರವೆಂದರು.

ನಾವು ಪಕ್ಷಿಯಿಂದ ಹಂಚಿ ತಿನ್ನುವ ಗುಣ ಕಲಿತು ಸಮಾಜದಲ್ಲಿ ಸರ್ವರನ್ನೂ ಒಗ್ಗೂಡಿಸಿಕೊಂಡು ಸರ್ವರ ಪ್ರಗತಿ ನಮ್ಮೆಲ್ಲರ ಪ್ರಗತಿ ಎಂದು ಬಾಳಿದಲ್ಲಿ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.

ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಜನತೆಯ ವಿಶ್ವಾಸ ವೃದ್ಧಿಸಿಕೊಂಡು ಸಮುದಾಯದ ಸೇವೆ ಮಾಡುವ ಹೊಣೆಗಾರಿಕೆ ಸಹಕಾರಿ ಸಂಘದ ಮೇಲಿದೆ ಎಂದರು.

ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿನ ಆರ್ಥಿಕ ಸಂಘಗಳು ಇಂದು ಅಶಿಸ್ತು ಹಾಗೂ ಅಪ್ರಾಮಾಣಿಕತನದ ಕಾರಣ ಪಾತಾಳಕ್ಕಿಳಿಯುತ್ತಿವೆ. ಆರ್ಥಿಕ ಶಿಸ್ತು, ಹೊಣೆಗಾರಿಕೆ ಮತ್ತು ಸೌಜನ್ಯಯುತ ಸೇವೆಯ ಮೂಲಕ ಸಂಸ್ಥೆ ಜನಮಾನಸದಲ್ಲಿ ಬೆಳೆಯಬೇಕು. ೪ಸ್ಕೈರ್ ಸಂಸ್ಥೆಯ ಹೆಸರು ವಿಚಿತ್ರವೆನಿಸಿತ್ತಾದರೂ ಅದರ ಉದ್ದೇಶ ನಾಲ್ಕು ದಿಕ್ಕುಗಳಲ್ಲೂ ಸೇವೆ ನೀಡುವ ಸಂಕಲ್ಪ ಕೇಳಿ ಸಂತಸವಾಯ್ತು. ಅಷ್ಟ ದಿಕ್ಕುಗಳಲ್ಲೂ ಸಂಸ್ಥೆ ವೃದ್ಧಿಗೊಳ್ಳಲಿ. ಅರ್ಹರಿಗೆ ಸ್ಪಂದಿಸಿ ಆರ್ಥಿಕ ನೆರವು ಕಲ್ಪಿಸಿ ಸಮಾಜದಲ್ಲಿ ಸ್ಥಿರತೆ ಮೂಡಿಸಲೆಂದರು.

ವೇದಿಕೆಯಲ್ಲಿ ಶೇಗುಣಸಿಯ ಡಾ.ಮಹಾಂತಶ್ರೀ, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಹಳಿಂಗಳಿಯ ಮಹಾವೀರ ಅಲ್ಲಮಪ್ರಭು ಸ್ವಾಮೀಜಿ, ರುದ್ರಣ್ಣಾ ಕಮ್ಮಾರ, ಸಂಜಯ ಶೆಟ್ಟೆನ್ನವರ, ಮಲ್ಲಿಕಾರ್ಜುನ ಮಠದ, ತಹಸೀಲ್ದಾರ ಗಿರೀಶ ಸ್ವಾದಿ, ದಾನಯ್ಯ ಹಿರೇಮಠ, ಸತೀಶ ಹಜಾರೆ, ಸಣ್ಣಯಮುನಪ್ಪ ನಾಯಕ, ಸದಾಶಿವ ಮೇಲಗಿರಿ ಉಪಸ್ಥಿತರಿದ್ದರು.

ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ದಲಾಲ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ಎಸ್.ಎಂ. ಅಮ್ಮಣಗಿಮಠ, ಮಹಾದೇವ ಕವಿಶೆಟ್ಟಿ, ಸಂಜಯ ತೇಲಿ, ಅರ್ಜುನ ಕಾಖಂಡಕಿ, ಸುಭಾಸ ಮಧುರಖಂಡಿ, ಪ್ರಭು ನಾಯಕ, ಡಾ.ರವಿ ಜಮಖಂಡಿ, ವಿಜಯಕುಮಾರ ಹಲಕುರ್ಕಿ ಇತರರು ಇದ್ದರು,