ಸಂಘದ ಅಭಿವೃದ್ಧಿಯಲ್ಲಿ ಹಿರಿಯರು ಹಾಗೂ ಮಾರ್ಗದರ್ಶಕರ ಪಾತ್ರ ಮಹತ್ವದ್ದಾಗಿದೆ. ಸಂಘದ ಸಂಸ್ಥಾಪಕ ಅಧ್ಯಕ್ಷ ಶಂಕರಲಿಂಗಪ್ಪ ಅವರು ತಮ್ಮ ದೊಡ್ಡಪ್ಪನಾಗಿದ್ದು, ಕುಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಅವರೇ ಪ್ರಮುಖ ಕಾರಣರಾಗಿದ್ದರು. ರೈತರು ಹಾಗೂ ಹಾಲು ಉತ್ಪಾದಕರಿಗೆ ಅವರು ನೀಡಿದ ಮಾರ್ಗದರ್ಶನ ಮತ್ತು ಸೇವೆಯನ್ನು ಸದಾ ಸ್ಮರಿಸುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಸಹಕಾರ ಸಂಘಗಳು ಕೇವಲ ಸಾಲ ನೀಡುವ ಸಂಸ್ಥೆಗಳಾಗದೆ ರೈತರು, ಬಡವರು, ಶ್ರಮಿಕರು ಹಾಗೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೈಜ ಸೇವೆ ಸಲ್ಲಿಸಬೇಕು ಎಂದು ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆನಕನಕಟ್ಟೆ ಯುವರಾಜ್ ಹೇಳಿದರು.

ತಾಲೂಕಿನ ಕುಪ್ಪೂರಿನ ಸಂಘದ ಆವರಣದಲ್ಲಿ ನಡೆದ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ತಾಲೂಕಿನಲ್ಲಿಯೇ ಸಂಘವನ್ನು ಮೊದಲಿಗೆ ಗಣಕೀಕರಣಗೊಳಿಸಲಾಗಿದ್ದು, ಇದರಿಂದ ಆಡಳಿತದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ಹೆಚ್ಚಾಗಿ ಸದಸ್ಯರಿಗೆ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.

ಸಂಘದ ಅಭಿವೃದ್ಧಿಯಲ್ಲಿ ಹಿರಿಯರು ಹಾಗೂ ಮಾರ್ಗದರ್ಶಕರ ಪಾತ್ರ ಮಹತ್ವದ್ದಾಗಿದೆ. ಸಂಘದ ಸಂಸ್ಥಾಪಕ ಅಧ್ಯಕ್ಷ ಶಂಕರಲಿಂಗಪ್ಪ ಅವರು ತಮ್ಮ ದೊಡ್ಡಪ್ಪನಾಗಿದ್ದು, ಕುಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಅವರೇ ಪ್ರಮುಖ ಕಾರಣರಾಗಿದ್ದರು. ರೈತರು ಹಾಗೂ ಹಾಲು ಉತ್ಪಾದಕರಿಗೆ ಅವರು ನೀಡಿದ ಮಾರ್ಗದರ್ಶನ ಮತ್ತು ಸೇವೆಯನ್ನು ಸದಾ ಸ್ಮರಿಸುವುದಾಗಿ ಹೇಳಿದರು. ಮಾಜಿ ಅಧ್ಯಕ್ಷ ಅರಳೀಕೆರೆ ಉಮೇಶ್ ಅವರು ತಮ್ಮ ರಾಜಕೀಯ ಗುರುವಾಗಿದ್ದು, ಅವರ ಮಾರ್ಗದರ್ಶನವನ್ನು ಸ್ಮರಿಸುವುದಾಗಿ ತಿಳಿಸಿದರು. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ತಮ್ಮ ಹಾಗೂ ಸಂಘದ ಪರವಾಗಿ ಶುಭಾಶಯಗಳನ್ನು ಸಲ್ಲಿಸಿದರು.ನೈಜ ಸೇವೆಗೆ ಆದ್ಯತೆ:

ಮಾಜಿ ಅಧ್ಯಕ್ಷ ಅರಳೀಕೆರೆ ಉಮೇಶ್ ಮಾತನಾಡಿ, ಹಲವು ದೊಡ್ಡ ನಾಯಕರ ಸಹಕಾರ ಸಂಘಗಳನ್ನು ಗಮನಿಸಿದಾಗ ಕೆಲವೊಮ್ಮೆ ಭಾಷಣಗಳಲ್ಲಿ ಮಾತ್ರ ದೊಡ್ಡ ಮಾತುಗಳು ಕೇಳಿಬರುತ್ತವೆ. ಆದರೆ ವಾಸ್ತವದಲ್ಲಿ ರೈತರು ಹಾಗೂ ಬಡವರಿಗೆ ಅಗತ್ಯ ನೆರವು ಸಿಗುವುದಿಲ್ಲ. ನಮ್ಮ ಸಂಸ್ಥೆ ಬರೀ ಮಾತುಗಳಿಗೆ ಸೀಮಿತವಾಗದೆ ನೈಜವಾಗಿ ರೈತರು ಹಾಗೂ ಶ್ರಮಿಕರ ನೆರವಿಗೆ ನಿಲ್ಲುತ್ತದೆ ಎಂದರು.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕಕ್ಕಾಗಿ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ದಾಖಲೆಗಳಲ್ಲಿ ಸಣ್ಣಪುಟ್ಟ ಕೊರತೆಗಳಿದ್ದರೂ ಪರಿಶೀಲಿಸಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಹಲವು ಸೇವೆಗಳ ಕೇಂದ್ರ:

ನಿರ್ದೇಶಕ ಅಣೇಕಟ್ಟೆ ರಾಕೇಶ್ ಮಾತನಾಡಿ, ಆರಂಭದಲ್ಲಿ ಪಡಿತರ ವಿತರಣೆಯ ಮೂಲಕ ಸೇವೆ ಪ್ರಾರಂಭಿಸಿದ ಸಂಘವು ಇಂದು ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಇನ್ನಷ್ಟು ಸೇವೆಗಳನ್ನು ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಶಂಕರಪ್ಪ ಅವರು ಸಂಘದ ಆಡಿಟ್ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷೆ ಶೈಲಾ, ನಿರ್ದೇಶಕರಾದ ಶಾಂತಕುಮಾರ್, ನಾಗರಾಜ್ ಮಾತನಾಡಿದರು. ಜಯಣ್ಣ, ಅರಳೀಕೆರೆ ಶಶಿಕುಮಾರ್, ಅಂಬಿಕಾ, ಮಹೇಶ್, ಹಾಗೂ ಸಿಬ್ಬಂದಿ ಯತೀಶ್, ತೇಜಾವತಿ, ಪವಿತ್ರ, ಕೃಷ್ಣಮೂರ್ತಿ, ತೇಜಸ್ವಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.