ಸಹಕಾರಿ ಸಂಸ್ಥೆ ರೈತರ ಜೀವಾಳ: ಶಾಸಕ ಭೀಮಣ್ಣ ನಾಯ್ಕ

| Published : Mar 10 2025, 12:18 AM IST

ಸಾರಾಂಶ

ಸಹಕಾರಿ ಸಂಘಗಳು ರೈತರಿಗೆ ಸ್ಪಂದಿಸುತ್ತಿರುವುದು ಆಶಾದಾಯಕವಾಗಿದೆ

ಸಿದ್ದಾಪುರ: ಸಹಕಾರಿ ಸಂಸ್ಥೆಗಳು ರೈತರ ಜೀವಾಳ. ಸಹಕಾರಿ ಸಂಘಗಳು ರೈತರಿಗೆ ಸ್ಪಂದಿಸುತ್ತಿರುವುದು ಆಶಾದಾಯಕವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ನಿರ್ಮಾಣಗೊಂಡ ಅಮೃತ ಗ್ರಾಹಕರ ಮಳಿಗೆ, ಎಪಿಎಂಸಿ ಗೋದಾಮು ಉದ್ಘಾಟಿಸಿ ಅವರು ಮಾತನಾಡಿದರು.

ಪಾರದರ್ಶಕವಾದ ಸೇವೆಯನ್ನು ಸಲ್ಲಿಸುತ್ತಿರುವ ಸಹಕಾರಿ ಸಂಘಗಳ ಮೇಲೆ ಸಹಕಾರಿ ಇಲಾಖೆ ಅಧಿಕಾರಿಗಳು ತಮ್ಮ ಹಸ್ತಕ್ಷೇಪ ನಡೆಸುತ್ತಿರುವುದು ಕಂಡು ಬರುತ್ತಿದ್ದು ಇದು ನಿಲ್ಲಬೇಕಾಗಿದೆ ಎಂದರು.

ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆಯಬೇಕು. ಶಾಸಕರ ಅನುದಾನದಡಿ ಸಂಘದ ಅಭಿವೃದ್ಧಿಗೆ ₹೫ ಲಕ್ಷ ನೀಡುತ್ತೇನೆ ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಕಟ್ಟಡದ ಸಂಕೀರ್ಣ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಸಹಕಾರಿ ಕ್ಷೇತ್ರವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಮುಂದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎನ್ನುವುದನ್ನು ಕೇಂದ್ರ ತಂಡ ಜಿಲ್ಲೆಯ ಬೈರುಂಬೆಗೆ ಬಂದು ಅಧ್ಯಯನ ನಡೆಸಿ ಈಗ ದೇಶದೆಲ್ಲೆಡೆ ಇಂಪ್ಲಿಮೆಂಟೇಶನ್ ಮಾಡುತ್ತಿದೆ. ಇದಕ್ಕೆ ಸಹಕಾರಿ ಕ್ಷೇತ್ರದ ಅನೇಕ ಹಿರಿಯ ಕೊಡುಗೆ ಇದೆ ಎಂದು ಹೇಳಿ ಇನ್ನು ಏಳು ದಿನದೊಳಗೆ ರೈತರ ಬೆಳೆ ವಿಮೆ ಅವರ ಖಾತೆಗೆ ಜಮಾ ಆಗಲಿದೆ ಎಂದರು.

ಕೃಷಿ ಸೇವಾ ಮತ್ತು ಸಂಘದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಸಹಕಾರಿ ಸಂಘಗಳು ಶಿಸ್ತನ್ನು ಅಳವಡಿಸಿಕೊಳ್ಳುವುದರ ಜತೆಗೆ ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕಾಗಿದೆ. ಸದಸ್ಯರು ಸಂಘದ ಶಕ್ತಿಯನ್ನು ನೋಡಿ ಸಾಲ ಕೇಳಬೇಡಿ. ನಿಮ್ಮ ಬೆಳೆಯನ್ನು, ಜೀವನದ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಸಾಲದ ಸಂಕೋಲೆಯಿಂದ ಹೊರ ಬರಬೇಕಾಗಿದೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳದಿದ್ದರೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಡಿಸಿಸಿ ಬ್ಯಾಂಕ್‌ಗೆ ಎಷ್ಟೇ ಹಣ ಬರುವುದಿದ್ದರೂ ಪ್ರಾಥಮಿಕ ಸಂಘಗಳಿಗೆ ನಾವು ಆರ್ಥಿಕ ಸಹಕಾರ ನೀಡುತ್ತಿರುವುದನ್ನು ತಡೆಯಲಿಲ್ಲ. ಸಂಘದ ಸದಸ್ಯರು ಸಂಘದೊಂದಿಗೆ ವ್ಯವಹಾರ ಮಾಡುವಂತಾಗಬೇಕು ಎಂದರು.

ಟಿಎಸ್‌ಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ನೂತನ ಕಟ್ಟಡದ ಮೊದಲ ಮಹಡಿ ಉದ್ಘಾಟಿಸಿದರು. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಶಿರಸಿ ಕದಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ಹಾರ್ಸಿಕಟ್ಟ ಗ್ರಾಪಂ ಅಧ್ಯಕ್ಷೆ ಹನುಮಕ್ಕ ರಂಗಪ್ಪ ಭೋವಿ, ಉಪಾಧ್ಯಕ್ಷ ಸಿದ್ದಾರ್ಥ ಡಿ.ಗೌಡರ್ ಇತರರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಂದನಾ ಹೆಗಡೆ, ಪವಿತ್ರಾ ಹೆಗಡೆ, ಪವಿತ್ರಾ ಗೌಡ ಪ್ರಾರ್ಥಿಸಿದರು. ನರೇಂದ್ರ ಹೆಗಡೆ ಹೊಂಡಗಾಸಿಗೆ, ದಿನೇಶ ಹೆಗಡೆ ಚಳ್ಳೆಹದ್ದ, ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.