ಸಾರಾಂಶ
ಸಿದ್ದಾಪುರ: ಇಲಾಖೆಗಳ ನಡುವಿನ ಅಂತರ ಮರೆತು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಒಂದಾಗಿ ಕೆಲಸ ಮಾಡಬೇಕು. ಜನರಲ್ಲಿ ರೋಗ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಗಂಣದಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಯವರು ಸಹಕರಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಈ ವರೆಗೆ ೮೨ ಜನರಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಅದರಲ್ಲಿ ೭ ಜನರು ಮೃತಪಟ್ಟಿದ್ದಾರೆ. ಯಾವ ಪ್ರದೇಶದಲ್ಲಿ ಮಂಗನ ಕಾಯಿಲೆ ಹೆಚ್ಚು ಕಂಡುಬಂದಿದೆಯೋ ಅಲ್ಲಿ ರಕ್ತ ಪರೀಕ್ಷೆಯನ್ನು ಹೆಚ್ಚಿಸಬೇಕು.ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರಕುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಜನರು ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದ ರೋಗಿಗಳಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಂಡುಬಂದರೆ ತಕ್ಷಣ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ಅದರ ವೆಚ್ಚವನ್ನು ಭರಿಸಲು ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆಯನ್ನು ಕಳುಹಿಸಲು ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಿದರು.
ವೈದ್ಯಾಧಿಕಾರಿಗಳ ಕೊರತೆ ಇರುವುದರಿಂದ ಬೇರೆ ತಾಲೂಕಿನಿಂದ ಅಥವಾ ಬೇರೆ ಕಡೆಯಿಂದ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ದೊರಕುವ ಹಾಗೆ ಮಾಡಲಾಗುವುದು ಎಂದರು.ಮಂಗನ ಕಾಯಿಲೆ ಕಾಣಿಸಿಕೊಂಡ ಬಿಪಿಎಲ್ ಪಡಿತರ ಚೀಟಿದಾರರಿಗೆ ಮಾತ್ರ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಪಿಎಲ್ ಪಡಿತರ ಚೀಟಿದಾರರು ಚಿಕಿತ್ಸೆಯ ಶೇ. ೭೦ರಷ್ಟು ಹಣ ಪಾಚವತಿಸಬೇಕೆಂದಿದ್ದು, ಅವರಿಗೂ ಉಚಿತ ಚಿಕಿತ್ಸೆ ನೀಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೇ ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರವನ್ನು ನೀಡುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಕ್ತ ತಪಾಸಣಾ ವರದಿ ಬರುವುದು ತಡವಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿರುವುದರಿಂದ ಶಿರಸಿಯಲ್ಲಿಯೇ ರಕ್ತ ತಪಾಸಣೆ ಮಾಡಿ ಬೇಗನೆ ವರದಿಬರುವಂತೆ ಮಾಡಲಾಗುವುದು. ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.ಜಿಪಂ ಸಿಇಒ ಈಶ್ವರಕುಮಾರ ಕಾಂದು ಮಾತನಾಡಿ, ಈಗಾಗಲೇ ಎಲ್ಲ ಇಲಾಖೆಯವರಿಗೆ ಮುಂಗನ ಕಾಯಿಲೆ ಕುರಿತು ಜಾಗೃತಿ ವಹಿಸುವಂತೆ ಸೂಚನೆ ನೀಡಲಾಗಿದೆ. ಪಿಡಿಒಗಳು ಹೆಚ್ಚು ಗಮನ ನೀಡಬೇಕಾಗಿದೆ. ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆಯವರು ಜಾಗ್ರತರಾಗಬೇಕಾಗಿದೆ ಎಂದರು.
ಡಿಎಚ್‌ಒ ಡಾ. ನೀರಜ್ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸ್ಥಿತಿಯ ಕುರಿತು ಮಾಹಿತಿ ನೀಡಿದರು. ಎಸಿ ಅಪರ್ಣಾ ರಮೇಶ, ಡಿಎಫ್‌ಒ ಡಾ. ಅಜ್ಜಯ್ಯ, ಶಿರಸಿ ತಹಸೀಲ್ದಾರ್ ಎಚ್.ಬಿ. ಪೀರಜಾಲ್, ಸಿದ್ದಾಪುರ ತಹಸೀಲ್ದಾರ್ ವಿಶ್ವಜೀತ್ ಮೇಹತಾ, ಡಾ. ಲಕ್ಷ್ಮಿಕಾಂತ ನಾಯ್ಕ, ಡಾ. ವಿನಾಯಕ ಭಟ್ಟ ಕಣ್ಣಿ ಸೇರಿದಂತೆ ಅರಣ್ಯ, ಪಶುಸಂಗೋಪನೆ, ಕಂದಾಯ ಇಲಾಖೆ ಅಧಿಕಾರಿಗಳಿದ್ದರು.