ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜನಪ್ರತಿನಿಧಿಗಳು ಹಾಗೂ ಸಮಾಜಮುಖಿ ಸಂಘಟನೆಗಳು ಒಂದಾಗಿ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಾ. ಮಂತರ್‌ಗೌಡ ಅಭಿಪ್ರಾಯಿಸಿದರು.ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ಖಾಸಗಿ ಸಮುದಾಯಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಾಸಕರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿ ಆ್ಯಂಡ್ ಡಿ ಜಾಗದ ಸಮಸ್ಯೆ ರೈತಾಪಿ ವರ್ಗದಲ್ಲಿ ಆತಂಕವನ್ನು ಸೃಷ್ಟಿಸಿದೆ. ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿಗೆ ಇಂದು ಕೃಷಿಕರು ಸಂಕಷ್ಟದಲ್ಲಿದ್ದಾರೆ. ಆದರೆ, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ರೈತರನ್ನು ಒಕ್ಕಲೆಬ್ಬಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈಗಾಗಲೇ ರೈತ ಮುಖಂಡರೊಂದಿಗೆ ಮಂತ್ರಿಗಳನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಲಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಎ.ಆರ್. ಕುಶಾಲಪ್ಪ, ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಚಕ್ರವರ್ತಿ ಸುರೇಶ್ ಅವರು, ಸಿ ಆ್ಯಂಡ್ ಡಿ ಮತ್ತು ಸೆಕ್ಷನ್-4 ಸರ್ವೇ ಹೆಸರಿನಲ್ಲಿ ಅರಣ್ಯ ಇಲಾಖೆಯವರು ರೈತರಿಗೆ ಭಯ ಹುಟ್ಟಿಸುತ್ತಿದ್ದಾರೆ. ಸರ್ಕಾರ ಈಗಾಗಲೇ ವಿಶೇಷ ಸಮಿತಿಯನ್ನು ರಚಿಸಿದೆ. ಸಮಿತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವವರೆಗೆ ಸಿ ಆ್ಯಂಡ್ ಡಿ ಮತ್ತು ಸೆಕ್ಷನ್-4 ಸರ್ವೇಗೆ ಗ್ರಾಮಕ್ಕೆ ಅಧಿಕಾರಿಗಳು ಬರಬಾರದೆಂದು ತಾಕಿತು ಮಾಡಿದರು.
ಗ್ರಾಮಸ್ಥರು ತಿಳಿವಳಿಕೆ ನೀಡದೆ ಅರಣ್ಯ ಇಲಾಖೆ ಸರ್ವೇ ಮಾಡಲು ಮುಂದಾಗಬಾರದು. ಈಗಾಗಲೇ ರೈತಾಪಿ ವರ್ಗ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಒಂದಷ್ಟು ತಾಳ್ಮೆ ವಹಿಸಬೇಕು ಎಂದು ಹೇಳಿದರು. ಕಂದಾಯ ಮತ್ತು ಅರಣ್ಯ ಇಲಾಖೆವರು ಜಂಟಿ ಸರ್ವೆ ಮಾಡಿದರೆ ಮಾತ್ರ ರೈತರಿಗೆ ನಂಬಿಕೆ ಬರುತ್ತದೆ ಎಂದು ಶಾಸಕರು ಹೇಳಿದರು. ಸೆಟಲ್‌ಮೆಂಟ್ ಸರ್ವೆಗೆ ಸರ್ಕಾರದೊಂದಿಗೆ ಚರ್ಚಿಸಿದ್ದೇನೆ ಎಂದು ಸಭೆಯ ಗಮನಕ್ಕೆ ತಂದರು.
ಪೊಲೀಸ್ ಇಲಾಖೆಯ ಕಾರ್ಯವೈಖರಿ ಕೆ.ಎನ್. ದೀಪಕ್ ಹೇಳಿದರು. ಕೆಲ ವರ್ಷಗಳ ಹಿಂದೆ ಪುಟ್ಟಪ್ಪ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ಆದರೆ, ಪಟ್ಟಣದೊಳಗೆ ಪೊಲೀಸರು ಕೆಲಸ ಮಾಡುವುದು ಕಾಣುತ್ತಿಲ್ಲ ಎಂದು ಹೇಳಿದರು.
ರೈತರಿಗೆ ಸಕಾಲದಲ್ಲಿ ಗೊಬ್ಬರ ವಿತರಿಸಬೇಕು. ಪಟ್ಟಣದ ಬಹುತೇಕ ಗೊಬ್ಬರದಂಗಡಿಗಳಲ್ಲಿ ದರಪಟ್ಟಿಯನ್ನು ಗೊತ್ತಾಗುವಂತೆ ಹಾಕುತ್ತಿಲ್ಲ. ದುಪ್ಪಟ್ಟು ಬೆಲೆಗೆ ರಾಸಾಯನಿಕ ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ಕಡಿಮೆ ಗುಣಮಟ್ಟದ ಗೊಬ್ಬರವನ್ನು ಮಿಕ್ಸ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದೊಂದು ಶೋಷಣೆ ಎಂದು ಕಾಫಿ ಬೆಳೆಗಾರರಾದ ಕೆ.ಎಂ. ದಿನೇಶ್ ಮತ್ತು ಎಸ್.ಬಿ.ಭರತ್ ಕುಮಾರ್ ಅವರುಗಳು ಆರೋಪಿಸಿದರು.ಕಾಡಾನೆ ಮಾನವ ಸಂಘರ್ಷ, ರೈತ ಸಮಸ್ಯೆ, ಕಾಡು ಪ್ರಾಣಿಗಳಿಂದ ಪ್ರಾಣಹಾನಿ, ಪರಿಹಾರದ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿದರು.
ಮಕ್ಕಳ ಹಕ್ಕುಗಳ ಬಗ್ಗೆ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಮಾತನಾಡುವಂತೆ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನಾ ಮ್ಯಾಥ್ಯು ಮನವಿ ಮಾಡಿದರು.ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ತಾಲೂಕು ಅಸ್ಪತ್ರೆಗೆ ವೈದ್ಯರ ನೇಮಕ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸೋಮವಾರಪೇಟೆಯಲ್ಲಿ ಆರ್‌ಟಿಒ ಉಪ ಕಚೇರಿ ಪ್ರಾರಂಭ, ಪಶು ಇಲಾಖೆಗೆ ವೈದ್ಯರ ನೇಮಕ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಶಾಸಕರಿಗೆ ಮನವಿ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ ತಹಸೀಲ್ದಾರ್ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಮುದ್ದು ಮಹಾದೇವ, ಶಿಕ್ಷಕಿ ಕೆ.ಟಿ. ಚಂದ್ರಕಲಾ, ಡಾ. ಜಮೀರ್ ಆಹಮ್ಮದ್, ಸೆಸ್ಕ್ ಎಇಇ ವಿನಯ್ ಕುಮಾರ್, ಜೆ.ಇ. ಲೋಕೇಶ್, ನಿವೃತ್ತ ತಹಸೀಲ್ದಾರ್ ಜಯರಾಮ್, ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ಪತ್ರಕರ್ತರಾದ ಹಿರಿಕರ ರವಿ, ವಿಜಯ್ ಹಾನಗಲ್, ಸಾಹಿತಿ ಹೇಮಂತ್ ಪಾರೇರ, ಮಲೇನಾಡು ಸ್ವರ್ಗ ತಂಡದ ಬಿನುಗೌಡ ಅವರನ್ನು ಸನ್ಮಾನಿಸಲಾಯಿತು.