ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು. ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಆಂಜನೇಯಸ್ವಾಮಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗದ್ದಿದ್ದರೆ ದೇಶ ಪರಿಸ್ಥಿತಿ ಈಗ ಏನು ಆಗುತ್ತಿತೋ ಗೊತ್ತಿಲ್ಲ, ಆಪರೇಷನ್ ಸಿಂದೂರ್ ಈ ದೇಶದ ಸ್ವಾಭಿಮಾನ ಪ್ರತೀಕ. ಸ್ವಾತಂತ್ರ್ಯದ ದಿನದಂದು ದೇಶದಲ್ಲಿ ಗ್ರಾಪಂ ಅಧ್ಯಕ್ಷರನ್ನು ಕರಸಿ ಗೌರವಿಸುವ ಕಾರ್ಯವನ್ನು ೧೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ದೇಶದ ಜನರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ೫ ಲಕ್ಷ ಕೋಟಿ ನೀಡಿದ್ದಾರೆ. ಇತಂಹ ಪ್ರದಾನಿ ವಿಶ್ವದಲ್ಲೇ ವಿರಳ ಎಂದರು. ಕೇಂದ್ರ ಸಚಿವ ಸೋಮಣ್ಣ ಗೃಹ ಸಚಿವ ಡಾ.ಜಿ.ಪರಮೇಶ್ವರರನ್ನು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಮುಂದೆಯೇ ಹಾಡಿ ಹೊಗಳಿದರು. ಈ ಕಾರ್ಯಕ್ರಮಕ್ಕೆ ಡಾ.ಜಿ.ಪರಮೇಶ್ವರ ಬರಬೇಕಿತ್ತು ಈ ಭಾಗಕ್ಕೆ ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಬರಬೇಕಿದೆ. ಇದಕ್ಕಾಗಿ ಎರಡು ಸರ್ಕಾರಗಳು ಶ್ರಮಿಸುತ್ತಿವೆ. ಈ ಕ್ಷೇತ್ರದ ಶಾಸಕರು, ರಾಜ್ಯದ ಸಚಿವರಾದ ಡಾ.ಜಿಪರಮೇಶ್ವರ್ ಈ ಭಾಗದ ಕೆರೆಗಳಿಗೆ ನೀರು ಹರಸಲು ಕೇಂದ್ರ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ. ನಾನು, ಡಾ.ಜಿ.ಪಮೇಶ್ವರ, ಕೆ.ಎನ್.ರಾಜಣ್ಣ ಮೂವರು ಸೇರಿ ಪಕ್ಷ ಭೇದ ಮರೆತು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವ ತೀರ್ಮಾನ ಮಾಡಿದ್ದೇವೆ ಎಂದರು. ತುಂಬಾಡಿ ಗ್ರಾಮದ ಮುಖಂಡರ, ಜನರ ಕೋರಿಕೆ ಮೇರೆಗೆ ಇಲ್ಲಿನ ಶಾಲಾ ಕೊಠಡಿ ನಿರ್ಮಾಣಕ್ಕೆ ೧.೧೦ ಕೋಟಿ ನೀಡುವುದಾಗಿ ಅದೇ ರೀತಿ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ ಪ್ಲೋರೈಡ್ ಯುಕ್ತ ಕುಡಿಯುವ ನೀರಿದ್ದು ಅಲ್ಲಿನ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ೨ ಕೋಟಿ ಅನುದಾನ ನೀಡಿರುವುದಾಗಿ ಮಾಹಿತಿ ನೀಡಿದರು. ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ನಮ್ಮ ಪೂರ್ವಜರು ಊರಿನ ಹಿತಕ್ಕಾಗಿ ದೇವಾಲಯಗಳನ್ನು ಕಟ್ಟುತ್ತಿದ್ದರು ಊರಿನಲ್ಲಿ ಆಂಜನೇಯಸ್ವಾಮಿ ದೇವಾಲಯವಿದ್ದರೆ ಆ ಊರು ದುಶ್ಟಶಕ್ತಿಗಳಿಂದ ದೂರ ಮತ್ತು ಶಾಂತಿ ನೆಮ್ಮದಿಯಿಂದ ಇರುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಯುವಕರಲ್ಲಿ ಮತ್ತು ಮಕ್ಕಳಲ್ಲಿ ದೈವದ ನಂಬಿಕೆ ಕಡಿಮೆಯಾಗುತ್ತಿರುವುದರಿಂದ ಯುವಕರು ಹಾದಿ ತಪ್ಪುತ್ತಿದ್ದಾರೆ, ತುಂಬಾಡಿ ಗ್ರಾಮದ ಜನರು ೨೫ ವರ್ಷಗಳಿಂದ ಶ್ರಮಿಸಿ ಒಂದು ದೊಡ್ಡ ಸಮುದಾಯ ಭವನವನ್ನು, ಕಲ್ಯಾಣ ಮಂಟಪದ ರೀತಿ ನಿರ್ಮಿಸಿರುವುದು ಸಾಧನೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಸಿ.ಲಕ್ಷ್ಮೀಶ್, ಮಾಜಿ ಶಾಸಕ ಪಿ.ಆರ್.ಸುಧಾಕರ್‌ಲಾಲ್, ಮಾಜಿ ಜಿ.ಪಂ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ತಾ.ಜೆಡಿಎಸ್ ಅಧ್ಯಕ್ಷ ಜಿ.ಎಂ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ತುಂಬಾಡಿ ಗ್ರಾ.ಪಂ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ಲತಾ, ಸದಸ್ಯರಾದ ಪ್ರಸನ್ನಕುಮಾರ್, ಹೇಮಂತ್, ಪ ಪಂ ಸದಸ್ಯ ಕೆ. ಎನ್ ಲಕ್ಷ್ಮೀನಾರಾಯಣ, ಮುಖಂಡರುಗಳಾದ ಜೆ. ಎನ್ ನರಸಿಂಹರಾಜು, ಮುಖಂಡರಾದ ತಿಮ್ಮಜ್ಜ, ವಿನಯ್‌ಬಾಬು, ಕೃಷ್ಣಚಾರ್, ರಾಘವೇಂದ್ರ, ಸಿದ್ದಮಲ್ಲಯ್ಯ, ಸೇರಿದಂತೆ ಇತರರು ಇದ್ದರು.