ಸುಳ್ಳು ಎಸ್ಸಿ ಪ್ರಮಾಣಪತ್ರ ಪಡೆದ ಪೊಲೀಸ್‌ಗೆ 7 ವರ್ಷ ಜೈಲು ಶಿಕ್ಷೆ

| Published : Dec 21 2023, 01:16 AM IST

ಸುಳ್ಳು ಎಸ್ಸಿ ಪ್ರಮಾಣಪತ್ರ ಪಡೆದ ಪೊಲೀಸ್‌ಗೆ 7 ವರ್ಷ ಜೈಲು ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದವನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹೩೦ ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಹಾವೇರಿ:

ಹಿರೇಕೆರೂರು ತಾಲೂಕು ಭೋಗಾವಿ ಗ್ರಾಮದ ಸೋಮಶೇಖರ ಭೀಮಪ್ಪ ಕುಂಕುಮಗಾರ ಮೂಲತಃ ಕುಂಮಗಾರ (ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಸಹ, ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಹನುಮಂತಪ್ಪ ತಳವಾರ ಅವರ ಸಹಕಾರ ಪಡೆದು “ಚನ್ನದಾಸರ” ಎಂದು ಜಾತಿ ಕಾಲಂನಲ್ಲಿ ನಮೂದಿಸಿ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿ ಸೃಷ್ಟಿಸಿ, ಹಿರೇಕೆರೂರು ತಹಸೀಲ್ದಾರರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾನೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರ ನಡಾವಳಿಯಿಂದ ಮತ್ತು ತನಿಖೆಯಿಂದ ಆರೋಪ ದೃಢಪಟ್ಟ ಅಂಶದ ಮೇಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಪೊಲೀಸ್ ಆರಕ್ಷಕ ಉಪ ನಿರೀಕ್ಷಕಿ ಜಯರತ್ನಮ್ಮ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿ ಮೇಲೆ ಹೊರಿಸಲಾದ ಆಪಾದನೆಗಳು ರುಜುವಾತದ ಹಿನ್ನೆಲೆ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಒಂದನೇ ಅಧಿಕ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.