ಕಾಪರ್ ಕೇಬಲ್‌, ಡ್ರಿಪ್‌ಪೈಪ್ ಕಳ್ಳತನ ಮಾಡಿದವರ ಪತ್ತೆ

| Published : Apr 20 2025, 01:51 AM IST

ಸಾರಾಂಶ

ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಕಳ್ಳತನವಾಗಿದ್ದ ಡ್ರಿಪ್‌ ಪೈಪ್ ಬಂಡಲ್‌ ಗಳನ್ನು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದಲ್ಲಿ ಕಳ್ಳತನವಾಗಿದ್ದ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್‌ನ್ನು ಪತ್ತೆ ಹಚ್ಚುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ 9 ಆರೋಪಿತರ ಪೈಕಿ ನಾಲ್ವರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ಮುಂಡರಗಿ: ತಾಲೂಕಿನ ಜಂತ್ಲಿ-ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಕಳ್ಳತನವಾಗಿದ್ದ ಡ್ರಿಪ್‌ ಪೈಪ್ ಬಂಡಲ್‌ ಗಳನ್ನು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದಲ್ಲಿ ಕಳ್ಳತನವಾಗಿದ್ದ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್‌ನ್ನು ಪತ್ತೆ ಹಚ್ಚುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ 9 ಆರೋಪಿತರ ಪೈಕಿ ನಾಲ್ವರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಹಿರೇವಡ್ಡಟ್ಟಿಯ ಮೈಲಾರಪ್ಪ ಹನಮಂತಪ್ಪ ಕಾಡಣ್ಣವರ, ನಾಗರಾಜ ಕಣಿವೆಪ್ಪ ಬಾಲಣ್ಣವರ,ಮಾಬೂಸಾಬ ಮಹ್ಮದಸಾಬ ಕೋಲಕಾರ, ಶರಣಪ್ಪ ವಿರೂಪಾಕ್ಷಪ್ಪ ಮೇವುಂಡಿ ಬಂಧಿತ ಆರೋಪಿತರು. ಇನ್ನು 5 ಜನ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.2024ನೇ ಸಾಲಿನಲ್ಲಿ ಜಂತ್ಲಿ-ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಡ್ರಿಪ್‌ಪೈಪ್ ಬಂಡಲ್‌ಗಳು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದ ಗಾಳಿ ವಿದ್ಯುತ್‌ಕಂಬದಲ್ಲಿನ ಕಾಪರ್ ಕೇಬಲ್ ಕಳ್ಳತನವಾಗಿದ್ದರ ಬಗ್ಗೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪತ್ತೆ ಕಾರ್ಯ ಕೈಗೊಂಡು ಕಳ್ಳತನ ಪ್ರಕರಣ ಪತ್ತೆ ಕಾರ್ಯಕ್ಕಾಗಿ ಗದಗ ಎಸ್‌ಪಿ ಬಿ.ಎಸ್. ನೇಮಗೌಡ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಎಸ್‌ಪಿ ಎಂ.ಬಿ. ಸಂಕದ, ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ವಿ.ಜೆ. ಪವಾರ, ಬಿ.ಎನ್. ಯಳವತ್ತಿ ಹಾಗೂ ನುರಿತ ಪೊಲೀಸ್ ಸಿಬ್ಬಂದಿ ಕಳ್ಳತನ ಪ್ರಕರಣ ಪತ್ತೆಮಾಡಿದ್ದಾರೆ.ಈ ಕುರಿತು ಎಸ್‌ಪಿ ಬಿ.ಎಸ್. ನೇಮಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇದಕ್ಕೆ ಸಂಬಂಧಿಸಿದ ಇನ್ನೂ ಐವರು ಆರೋಪಿತರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ. ಒಟ್ಟು 8 ಲಕ್ಷ 85 ಸಾವಿರ ರು.ಗಳ ಮೌಲ್ಯದ ಸುಮಾರು 204 ಡ್ರಿಪ್‌ಪೈಪ್ ಬಂಡಲ್‌ಗಳನ್ನು ಹಾಗೂ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್‌ನ್ನು ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಟಾಟಾ ಇಂಟ್ರಾ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.ಈ ವೇಳೆ ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ವಿ.ಜೆ. ಪವಾರ, ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ.ಹಡಪದ, ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಲಕ್ಷ್ಮಣ ಲಮಾಣಿ, ಮಹೇಶ ಗೊಳಗೊಳಕಿ, ಎಸ್.ಎಚ್. ಡೊಣಿ, ಮಲ್ಲಿಕಾರ್ಜುನ ಬನ್ನಿಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.