ಪ್ರಸ್ತುತ 3 ರಿಂದ 5 ರೂಪಾಯಿಗೆ ಕುಸಿದಿದೆ. ಕೆಲವು ಸಗಟು ಮಾರುಕಟ್ಟೆಗಳಲ್ಲಿ ಒಂದು ಕಟ್ಟು ಕೇವಲ 1 ರುಪಾಯಿಗೂ ಕೇಳುವವರಿಲ್ಲದಂತಾಗಿದೆ.
ಬೆಲೆ ಕುಸಿತ ಹಿನ್ನೆಲೆ । ರೈತರಿಗೆ ಭಾರೀ ನಷ್ಟ । ಸಗಟು ಮಾರುಕಟ್ಟೆಗಳಲ್ಲಿ ಕೇಳುವವರೇ ಇಲ್ಲ । ಸಾಗಾಣಿಕೆ ವೆಚ್ಚವೂ ಸಿಗುತ್ತಿಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮಾರ್ಕೆಟ್ನಲ್ಲಿ ಕೊತ್ತಂಬರಿ ಸೊಪ್ಪಿನ ದರ ತೀವ್ರವಾಗಿ ಕುಸಿತ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪಿನ ಆವಕ ದಿಢೀರ್ ಹೆಚ್ಚಾದ ಕಾರಣ, ಬೆಲೆಗಳು ಪಾತಾಳಕ್ಕೆ ಇಳಿದಿದ್ದು ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಆಗಸ್ಟ್ 2026ರಲ್ಲಿ ಆರಂಭದ ದಿನಗಳಲ್ಲಿ ಪ್ರತಿ ಒಂದು ಕೆಜಿ ಕೊತ್ತಂಬರಿ ಸೊಪ್ಪಿನ ಕಟ್ಟು50 ರಿಂದ 80 ರುಪಾಯಿಗೆ ಮಾರಾಟವಾಗುತ್ತಿತ್ತು. ಕ್ರಮೇಣ 20-30 ರೂಗೆ ಇಳಿಕೆಯಾಗಿ, ಪ್ರಸ್ತುತ 3 ರಿಂದ 5 ರೂಪಾಯಿಗೆ ಕುಸಿದಿದೆ. ಕೆಲವು ಸಗಟು ಮಾರುಕಟ್ಟೆಗಳಲ್ಲಿ ಒಂದು ಕಟ್ಟು ಕೇವಲ 1 ರುಪಾಯಿಗೂ ಕೇಳುವವರಿಲ್ಲದಂತಾಗಿದೆ.ಸಾಗಾಣಿಕೆ ವೆಚ್ಚವೂ ಕೈಗೆ ಸಿಗದ ಕಾರಣ ಬೇಸತ್ತ ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳ ರೈತರು ತಾವೇ ಬೆಳೆದ ಕೊತ್ತಂಬರಿ ಸೊಪ್ಪನ್ನು ರಸ್ತೆ ಬದಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ. ಇನ್ನೂ ಕೆಲವಡೆ ಕೊತ್ತಂಬರಿ ಸೊಪ್ಪುನ್ನು ಕೀಳದೆ ತೋಟಗಳಲ್ಲಿಯೇ ಸೊರಗುತ್ತಿದೆ.
ಮಾರುಕಟ್ಟೆಗೆ ಭಾರೀ ಆವಕ: ಏಕಕಾಲದಲ್ಲಿ ಎಲ್ಲಾ ಭಾಗಗಳಿಂದಲೂ ಮಾರುಕಟ್ಟೆಗೆ ಸರಕು ಹರಿದು ಬಂದಿರುವುದರಿಂದ ವ್ಯಾಪಾರಿಗಳು ಕಡಿಮೆ ಬೆಲೆಗೆ ಬೇಡಿಕೆ ಇಡುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ, ಪುಣೆ, ನಾಗಪುರ,ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮದ್ಯಪ್ರದೇಶ ಇತ್ಯಾದಿ ಹೊರ ರಾಜ್ಯಗಳಿಗೆ ಸಾಗಣೆಯಾಗುವ ಪ್ರಮಾಣದಲ್ಲಿ ಏರುಪೇರಾಗಿರುವುದು ಸ್ಥಳೀಯ ಮಾರುಕಟ್ಟೆಯ ಮೇಲೆ ಒತ್ತಡ ಉಂಟುಮಾಡಿದೆ.ಜಿಲ್ಲೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ತೀವ್ರ ಕುಸಿದಿರುವ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಎಕರೆ ಕೊತ್ತಂಬರಿ ಸೊಪ್ಪು ಬೆಳೆಯಬೇಕಾದರೆ 40 ಸಾವಿರ ರು. ವೆಚ್ಚ ತಗಲುತ್ತದೆ. ಆಗಸ್ಟ್ ತಿಂಗಳ ಮದ್ಯ ಭಾಗದಲ್ಲಿ ಕೊತ್ತಂಬರಿ 1ಕೆಜಿಯ ಕಟ್ಟು ಕೇವಲ 10-15 ರು.ಗೆ ಮಾರಾಟವಾಗುತ್ತಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ಹಿಂದೆ 45 ದಿನಗಳ ಕಾಲಾವಧಿಯಲ್ಲಿ ಕಟಾವಿಗೆ ಬರುವ ಕೊತ್ತಂಬರಿ ಸೊಪ್ಪನ್ನು ಬೆಳೆಯಲಾಗುತ್ತಿತ್ತು. ಇದರೆ ಈಗ ಹೈಬ್ರೀಡ್ ತಳಿ ಬೀಜದ ಬಿತ್ತನೆಯಿಂದ ಕೇವಲ 1 ತಿಂಗಳಲ್ಲಿ ಕೊತ್ತಂಬರಿ ಸೊಪ್ಪು ಕಟಾವಿಗೆ ಬರುತ್ತಿರುವ ಕಾರಣ ಹೆಚ್ಚಿನ ರೈತರು ಕೊತ್ತಂಬರಿಯನ್ನು ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ದರ ನೆಲಕಚ್ಚಿದೆ.
ಕಳೆದ 6 ತಿಂಗಳ ಹಿಂದೆ ಇಲ್ಲಿನ ಕೊತ್ತಂಬರಿ ಸೊಪ್ಪು ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಅಲ್ಲಿಯೂ ಹೆಚ್ಚಿನ ಕೊತ್ತಂಬರಿ ಬೆಳೆದಿರುವ ಕಾರಣ ಇಲ್ಲಿನ ಕೊತ್ತಂಬರಿ ಸೊಪ್ಪನ್ನು ಖರೀದಿ ಮಾಡದೇ ಇರುವುದು ಬೇಡಿಕೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.ಇತ್ತೀಚಿಗೆ ಜಿಲ್ಲೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದ ರೈತರು ಅಸಲು ಹಣ ಬಾರದೇ ನಷ್ಟ ಪಡುತ್ತಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಗೆ ಬೇಡಿಕೆ ಇಲ್ಲದ ಕಾರಣ ರೈತರು ತೀವ್ರ ನಿರಾಸೆಯಿಂದ ಇದ್ದು ಕೈ ಸಾಲ ಹಾಗೂ ಬ್ಯಾಂಕ್ ಸಾಲ ಹೇಗೆ ತೀರಿಸುವುದು ಎಂಬ ಅತಂಕದಲ್ಲಿ ತೊಡಗಿದ್ದಾರೆ ಎಂದು ಕತ್ತಂಬರಿ ಬೆಳೆದ ಯುವ ರೈತ ಅರೂರಿನ ಗಿರೀಶ್ ತಿಳಿಸಿದ್ದಾರೆ.
ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಕನಿಷ್ಠ ಬೆಂಬಲ ಬೆಲೆ ಹಾಗೂ ನ್ಯಾಯಯುತ ಮಾರುಕಟ್ಟೆ ದರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಸಿಕೆಬಿ-2 ಅರೂರಿನ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮುಂಭಾಗ ಯುವ ರೈತ ಗಿರೀಶ್ ಬೆಳೆದಿರುವ ಕೊತ್ತಂಬರಿ ಸೊಪ್ಪು ಕೀಳದೆ ತೋಟದಲ್ಲೇ ಬಿಟ್ಟಿರುವುದು.