ಸಾರಾಂಶ
ಸೂರಣಗಿ, ಗೊಜನೂರ, ದೊಡ್ಡೂರ, ಯಲ್ಲಾಪೂರ, ಶಿಗ್ಲಿ, ಅಕ್ಕಿಗುಂದ, ಪು.ಬಡ್ನಿ, ಬಟ್ಟೂರ, ಯಳವತ್ತಿ, ಬಾಲೆಹೊಸೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಗೋವಿನ ಜೋಳ ಬೆಳೆಯುತ್ತಿರುವ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಅಶೋಕ ಸೊರಟೂರ
ಲಕ್ಷ್ಮೇಶ್ವರ: ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಅತಿಯಾದ ಮಳೆಗೆ ಕೊಯ್ಲಿಗೆ ಬಂದಿರುವ ಗೋವಿನ ಜೋಳದ ತೆನೆಗಳು ನೆಲಕ್ಕುರುಳಿ ಅಲ್ಲಿಯೇ ಮೊಳಕೆಯೊಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ತಾಲೂಕಿನಲ್ಲಿ ಈ ವರ್ಷ ಸುರಿಯುತ್ತಿರುವ ಮಳೆ ರೈತರಿಗೆ ಅಪಾರ ಹಾನಿಯುಂಟು ಮಾಡಿದೆ. ಕೊಯ್ಲಿಗೆ ಬಂದಿರುವ ಗೋವಿನ ಜೋಳದ ಬೆಳೆ ಅತಿಯಾದ ತೇವಾಂಶದಿಂದ ನೆಲಕ್ಕುರುಳಿದೆ. ಹೀಗೆ ಬಿದ್ದ ತೆನೆಯಲ್ಲಿ ಮೊಳಕೆಯೊಡೆಯುತ್ತಿದ್ದು, ರೈತರಿಗೆ ಅಪಾರ ಹಾನಿಯುಂಟು ಮಾಡಿದೆ.
ಸೂರಣಗಿ, ಗೊಜನೂರ, ದೊಡ್ಡೂರ, ಯಲ್ಲಾಪೂರ, ಶಿಗ್ಲಿ, ಅಕ್ಕಿಗುಂದ, ಪು.ಬಡ್ನಿ, ಬಟ್ಟೂರ, ಯಳವತ್ತಿ, ಬಾಲೆಹೊಸೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಗೋವಿನ ಜೋಳ ಬೆಳೆಯುತ್ತಿರುವ ರೈತರಿಗೆ ಸಂಕಷ್ಟ ತಂದೊಡ್ಡಿದೆ.ತಾಲೂಕಿನಾದ್ಯಂತ ಸುಮಾರು 14,698 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುವ ಬೆಳೆಯಾಗಿರುವ ಜೋಳಕ್ಕೆ ಈಗ ಮಳೆಯ ಕಾಟ ಶುರುವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಲದ್ದಿ ಹುಳುವಿನ ಬಾಧೆಯಿಂದ ಪಾರಾಗಿದ್ದ ಗೋವಿನ ಜೋಳದ ಬೆಳೆಗೆ ಈಗ ಮಳೆ ಕಂಟಕವಾಗಿ ಪರಿಣಮಿಸಿದೆ.ಮಳೆರಾಯನ ಕಾಟ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಗೋವಿನ ಜೋಳದ ಬೆಳೆ ಇನ್ನೇನು ಆದಾಯ ತಂದು ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ನಮಗೆ ಮಳೆರಾಯ ಕಾಟ ಕೊಡುತ್ತಿದ್ದಾನೆ. ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಮಳೆ ಬೆಳೆ ನೆಲಕ್ಕುರುಳುವಂತೆ ಮಾಡಿದೆ. ತೆನೆಯು ಮೊಳಕೆಯೊಡೆದು ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.ಈರಣ್ಣ ಚನಬಸಪ್ಪ ಶಿರನಹಳ್ಳಿ
ಸೂರಣಗಿ ಗ್ರಾಮದ ರೈತ