ಕೊರೋನಾ ಲಸಿಕೆಯಿಂದ ಹೃದಯಘಾತ ಸಂಭವಿಸಲ್ಲ; ಶಾಸಕ ಬಾಲಕೃಷ್ಣ

| Published : Jul 28 2025, 12:30 AM IST

ಕೊರೋನಾ ಲಸಿಕೆಯಿಂದ ಹೃದಯಘಾತ ಸಂಭವಿಸಲ್ಲ; ಶಾಸಕ ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರದಲ್ಲಿ ಮೊದಲನೇ ದಿನ ಯಶಸ್ವಿಯಾಗಿ ನೂರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ನೋಂದಣಿ ಮಾಡಿಸಿಕೊಂಡು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ನುರಿತ ವೈದ್ಯರು ಹಾಗೂ ಅತ್ಯಾಧುನಿಕ ಯಂತ್ರಗಳ ಮೂಲಕ ತಪಾಸಣೆ ಮಾಡಿಸುತ್ತಿರುವುದರಿಂದ ನಿಖರ ಫಲಿತಾಂಶ ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ಕೊರೋನಾ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಏರ್ಪಡಿಸಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಮನವಿ ಮಾಡಿದರು.

ಪಟ್ಟಣದ ಜ್ಯೋತಿನಗರದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಎಸ್ ರಾಮಯ್ಯ ಆಸ್ಪತ್ರೆ, ಮಹಾನಾಡು ಕಟ್ಟೆಮನೆ, ಡಿ.ಕೆ.ಚಾರಿಟಬಲ್ ಟ್ರಸ್ಟ್‌ ಹಾಗೂ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ 10 ದಿನಗಳ ಕಾಲ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೃದಯ ತಪಾಸಣಾ ಶಿಬಿರ ನಿರಂತರವಾಗಿ ನಡೆಸಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದು, ಪ್ರತಿದಿನ 80 ಜನ ರೋಗಿಗಳಿಗೆ ತಪಾಸಣೆ ಮಾಡಿಸಲಾಗುತ್ತಿದೆ. ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕು. ಇದಕ್ಕೆ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಹಕಾರ ನೀಡುತ್ತಿದ್ದು, ಮೊದಲ ದಿನ ತಪಾಸಣೆಯಲ್ಲಿ ಐದು ಜನ ರೋಗಿಗಳಿಗೆ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಇದಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ಹೃದಯ ಸಂಬಂಧಿ ಕಾಯಿಲೆ ವಾಸಿ ಮಾಡಿಕೊಳ್ಳಬಹುದು ಎಂದು ಬಾಲಕೃಷ್ಣ ತಿಳಿಸಿದರು.

ಈಗ ಹೆಚ್ಚು ಯುವಕರಲ್ಲೇ ಹೃದಯಾಘಾತ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಅವರ ಜೀವನಶೈಲಿ ಕಾರಣವಾಗಿದೆ. ಧೂಮಪಾನ, ಮದ್ಯಪಾನ ಹೆಚ್ಚಾಗಿ ಮಾಡುತ್ತಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಅವರೇ ಮನವರಿಕೆ ಮಾಡಿಕೊಂಡು ದುಶ್ಚಟಗಳಿಂದ ದೂರವಾದಾಗ ಮಾತ್ರ ಹೃದಯಘಾತ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಮಾಗಡಿಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮಾಡುತ್ತಿರುವುದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಶಿಬಿರವನ್ನು ಕುದೂರು, ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿ, ಶಿಬಿರದಲ್ಲಿ ಮೊದಲನೇ ದಿನ ಯಶಸ್ವಿಯಾಗಿ ನೂರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ನೋಂದಣಿ ಮಾಡಿಸಿಕೊಂಡು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ನುರಿತ ವೈದ್ಯರು ಹಾಗೂ ಅತ್ಯಾಧುನಿಕ ಯಂತ್ರಗಳ ಮೂಲಕ ತಪಾಸಣೆ ಮಾಡಿಸುತ್ತಿರುವುದರಿಂದ ನಿಖರ ಫಲಿತಾಂಶ ಸಿಗುತ್ತಿದೆ ಎಂದು ತಿಳಿಸಿದರು.

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಕುಮಾರ್, ಟಿಎಪಿಎಂಎಸ್ ನಿರ್ದೇಶಕ ಮಂಜುನಾಥ್, ಮುಖಂಡರಾದ ರಹಮತ್, ಹೇಮಲತಾ, ಆನಂದ್, ಪಾಪಣಿ, ಅಬಿದ್, ತೇಜು, ರಾಜಣ್ಣ, ಕಿರಣ್ ಸೇರಿ ಇತರರು ಭಾಗವಹಿಸಿದ್ದರು.