ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದೋ ತಿಳಿಯದೋ ಕಾರ್ಪೊರೇಟ್ ಸಂಸ್ಕೃತಿ ಕಾಲಿಟ್ಟಿತ್ತು. ಅದನ್ನು ಬಳಕೆ ಮಾಡಿಕೊಂಡ ನಾವು ಅದರಿಂದ ಹೊರಬರಲಾಗದೆ ವೈದ್ಯ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕಾರ್ಪೊರೇಟ್ ಸಂಸ್ಕೃತಿಗೆ ಒಂದು ರೀತಿಯಲ್ಲಿ ನಾವೆಲ್ಲಾ ಒಗ್ಗಿಕೊಳ್ಳುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾರ್ಪೊರೇಟ್ ಸಂಸ್ಕೃತಿಯಿಂದಾಗಿ ಇಂದು ವೈದ್ಯ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಹಿರಿಯ ಮಕ್ಕಳ ತಜ್ಞ ಡಾ. ಜಗದೀಶ್‌ಕುಮಾರ್ ವಿಷಾದಿಸಿದರು.

ಸಂತೋಷ್ ಪಿಯು ಕಾಲೇಜು ಇವರ ವತಿಯಿಂದ ನಗರ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ವೈದ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದೋ ತಿಳಿಯದೋ ಕಾರ್ಪೊರೇಟ್ ಸಂಸ್ಕೃತಿ ಕಾಲಿಟ್ಟಿತ್ತು. ಅದನ್ನು ಬಳಕೆ ಮಾಡಿಕೊಂಡ ನಾವು ಅದರಿಂದ ಹೊರಬರಲಾಗದೆ ವೈದ್ಯ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕಾರ್ಪೊರೇಟ್ ಸಂಸ್ಕೃತಿಗೆ ಒಂದು ರೀತಿಯಲ್ಲಿ ನಾವೆಲ್ಲಾ ಒಗ್ಗಿಕೊಳ್ಳುವಂತಾಗಿದೆ. ಖರ್ಚು ವೆಚ್ಚಗಳ ಪ್ರಮಾಣವೂ ಹೆಚ್ಚಾಗಿದೆ. ಪ್ರತಿಯೊಂದು ಚಿಕಿತ್ಸೆಗೂ ಹೆಚ್ಚಿನ ಖರ್ಚು ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯ ವೃತ್ತಿ ದುಡ್ಡಿಗಾಗಿ ಬಂದಂತಹುದ್ದಲ್ಲ. ಜನ ಸೇವೆಗಾಗಿ ಬಂದಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆ ಮಾಡಿದಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯ. ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಯೋಜನೆಗಳನ್ನು ಮಾಡುತ್ತಿದೆ. ಒಳ್ಳೆಯ ಕೆಲಸ ಮಾಡಿದ್ದರೂ ಸಹ ಅದು ಸಾಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಗುಣಮಟ್ಟದ ಚಿಕಿತ್ಸೆ ನೀಡುತ್ತಿವೆ. ಜನರೂ ಇದನ್ನು ಒಪ್ಪಿಕೊಂಡು ಮನ್ನಣೆ ನೀಡುತ್ತಾರೆ. ಆದರೆ, ಅವರಿಗೆ ಅಷ್ಟು ಪ್ರಮಾಣದ ದುಡ್ಡು ಕೊಡುವ ಶಕ್ತಿಯೂ ಇಲ್ಲದೆ ನೋವು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ಹತ್ತು-ಹನ್ನೆರಡು ಎಕರೆ ಜಮೀನಿದ್ದವನು ಶ್ರೆಮಂತ, ಮಹಾರಾಜ. ಆದರೆ ಇಂದು ೬೦ ರಿಂದ ೭೦ ಎಕರೆ ಜಮೀನಿದ್ದರೂ ರೈತ ಬೇಡುವಂತಹ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ಕಾರಣ ಆತ ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗದಿರುವುದೇ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತನಿಗೆ ಬೇಕಾದಂತಹ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆತ ಬೆಳೆದ ಬೆಳೆಗೆ ೩ ರು. ಕೊಟ್ಟು ದಲ್ಲಾಳರು ಕೊಂಡು ತಂದು ಮಾರುಕಟ್ಟೆಗಳಲ್ಲಿ ೨೦ ರು.ಗಳಿಗೆ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಾರೆ. ಕಷ್ಟಪಟ್ಟು ಹೆಚ್ಚು ಶ್ರಮವಹಿಸಿ ಬೆಳೆದ ಬೆಳೆಗೆ ಆತನ ಕೂಲಿ ಇರಲಿ, ರೈತ ಹಾಕಿದ ಬಂಡವಾಳವೂ ಬರುವುದಿಲ್ಲ. ನಮ್ಮಣ್ಣ ದೊಡ್ಡ ಹಿಡುವಳಿದಾರ. ಆದರೂ ನಮ್ಮ ಬಳಿ ಕೈ ಚಾಚುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ರೈತರೂ ಇದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದಂತೆ ಪ್ರತಿಯೊಬ್ಬರೂ ಅತ್ಯಂತ ಎತ್ತರದ ಕನಸನ್ನು ಕಾಣಬೇಕು. ಅದನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನವನ್ನೂ ಹಾಕಬೇಕು. ಅವರು ಹೇಳಿದಂತೆ ಪಿಯು ಶಿಕ್ಷಣ ಇಡೀ ಶಿಕ್ಷಣದಲ್ಲೇ ಅತ್ಯಂತ ಪ್ರಮುಖವಾದ ಘಟ್ಟ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎರಡು ವರ್ಷಗಳನ್ನು ತಪಸ್ಸಿನ ರೀತಿಯಲ್ಲಿ ಸ್ವೀಕಾರ ಮಾಡಬೇಕು. ಇದು ಬದುಕಿನ ತಿರುವಿನ ಘಟ್ಟ. ಇದನ್ನು ಅತ್ಯಂತ ಗಂಭೀರ ಮತ್ತು ಸವಾಲಾಗಿ ಸ್ವೀಕರಿಸಬೇಕು. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದೇ ಆದಲ್ಲಿ ಪಿಯು ಅಧ್ಯಾಪಕರ ಶ್ರಮ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯರಾದ ಡಾ. ಸಿ.ಎಸ್.ರವಿ, ಡಾ. ಕೆ.ಸಿ. ಶ್ರೆಧರ್, ಡಾ. ಆರ್.ಶಶಿಕಲಾ, ಡಾ. ಸಿ.ನಿಂಗಯ್ಯ, ಡಾ.ತನುಶ್ರೀ, ಸಂಸ್ಥೆಯ ಉಪಾಧ್ಯಕ್ಷ ಗುರುಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ವೈದ್ಯರಾದ ಡಾ. ವಿ.ಶರತ್‌ಕುಮಾರ್, ಎಚ್.ವಿ.ಪೂಜಾ, ಡಾ.ಕೆ.ಚಂದನ್, ಡಾ.ಜಿ.ಆರ್. ಮಾಲಾ, ಡಾ.ಕೆ.ಎಲ್.ಚೇತನ್‌ಕುಮಾರ್ ಸೇರಿದಂತೆ ೧೬ ಮಂದಿ ವೈದ್ಯರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.