₹43 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪಾಲಿಕೆ ಕ್ರಮ

| Published : Feb 12 2024, 01:33 AM IST

₹43 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪಾಲಿಕೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯಲ್ಲಿ ಸಂಗ್ರಹವಾದ ತ್ಯಾಜ್ಯದ ವಿಲೇವಾರಿಗೆ ನಗರದ ಹೊರವಲಯದಲ್ಲಿ ನಿರ್ಮಿಸಲಾದ ಭೂ ಭರ್ತಿ ಕ್ವಾರಿಗಳ ಸುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಸಂಗ್ರಹವಾದ ತ್ಯಾಜ್ಯದ ವಿಲೇವಾರಿಗೆ ನಗರದ ಹೊರವಲಯದಲ್ಲಿ ನಿರ್ಮಿಸಲಾದ ಭೂ ಭರ್ತಿ ಕ್ವಾರಿಗಳ ಸುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.

ಭೂ ಭರ್ತಿ ಕೇಂದ್ರಗಳಲ್ಲಿ ತ್ಯಾಜ್ಯ ಸುರಿಯುವುದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಜತೆಗೆ ವಿಷಕಾರಿ ಅಂಶಗಳು ಸುತ್ತಲಿನ ಅಂತರ್ಜಲ ಸೇರುತ್ತಿದೆ. ಇದರಿಂದ ರೋಗ-ರುಜಿನಕ್ಕೆ ಆಸ್ಪದ ನೀಡಿವೆ. ಈ ಸಮಸ್ಯೆಗೆ ಪರಿಹಾರಕ್ಕೆ ಶಾಸಕರು ನಿರಂತರವಾಗಿ ಪಾಲಿಕೆ ಹಾಗೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಕೆಲ ವರ್ಷಗಳಿಂದ ಮಹದೇವಪುರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಭೂ ಭರ್ತಿ ಕೇಂದ್ರಗಳಿಂದ ಸಮಸ್ಯೆ ಉಂಟಾಗಿ ಸ್ಥಳೀಯರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ನಂತರ ಪಾಲಿಕೆಯು ಅಂತಹ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನ ನೀಡಿತ್ತು . ಇದರಿಂದ ಅಲ್ಪ ಸ್ವಲ್ಪ ಅಭಿವೃದ್ಧಿ ಕಂಡಿದ್ದರೂ, ಇನ್ನೂ ಸಾಕಷ್ಟು ಸಮಸ್ಯೆ ಹಾಗೆಯೇ ಉಳಿದಿವೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ 2023- 24ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಬಳಸಿಕೊಂಡು ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಕಟ್ಟಡ ಸೇರಿದಂತೆ ಮೊದಲಾದ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಒಟ್ಟು ₹42.85 ಕೋಟಿ ವೆಚ್ಚದಲ್ಲಿ 8 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಸಲು ಬಿಬಿಎಂಪಿಯ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಟೆಂಡರ್ ಆಹ್ವಾನಿಸಿದೆ. ಕಾಮಗಾರಿ ಪೂರ್ಣಗೊಳಿಸಲು ಮೂರರಿಂದ ಆರು ತಿಂಗಳ ಸಮಯ ನೀಡಲಾಗಿದೆ.ಬಾಕ್ಸ್‌...

ಯಾವ ಗ್ರಾಮಕ್ಕೆ ಎಷ್ಟು ಹಣ?

ಭೂ ಭರ್ತಿ ಕೇಂದ್ರಗಳ ಸುತ್ತಲಿನ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವ 8 ಸ್ಥಳಗಳಲ್ಲಿ ಏಳು ಪಾಲಿಕೆ ವ್ಯಾಪ್ತಿಯಲ್ಲಿವೆ. ಇನ್ನುಳಿದ ಒಂದು ಕೇಂದ್ರ ದೊಡ್ಡಬಳ್ಳಾಪುರ ತಾಲೂಕಿನಲ್ಲಿದ್ದು, ಅಲ್ಲಿನ ಎಂಎಸ್‌ಜಿಪಿ ಸಂಸ್ಕರಣಾ ಘಟಕದ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೂ ₹1.59 ಕೋಟಿ ನೀಡಲಾಗಿದೆ.

ಬೆಂಗಳೂರು ದಕ್ಷಿಣದ ಬಿಂಗಿಪುರ ಮತ್ತು ಲಕ್ಷ್ಮೀಪುರ ಗ್ರಾಮಗಳ ಅಭಿವೃದ್ಧಿಗೆ ₹8.06 ಕೋಟಿ, ಬೆಂ.ದಕ್ಷಿಣ ಕ್ಷೇತ್ರದ ಹುಲ್ಲಹಳ್ಳಿ ಹಾಗೂ ಲಕ್ಷ್ಮೀಪುರ ₹8.06 ಕೋಟಿ, ಕೋಗಿಲು ಹಾಗೂ ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ₹6.39 ಕೋಟಿ, ಬ್ಯಾಟರಾಯನಪುರದ ವಾರ್ಡ್‌ ಸಂಖ್ಯೆ ವಾರ್ಡ್ 10, 11, 13ಗೆ ₹6.39 ಕೋಟಿ, ಮಹದೇವಪುರದ ಕಣ್ಣೂರು ಕೇಂದ್ರ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ₹6.16 ಕೋಟಿ, ಮಿಟ್ಟಗಾನಹಳ್ಳಿ ಘಟಕದ ವ್ಯಾಪ್ತಿಯ ಗ್ರಾಮಗಳಿಗೆ ₹5.57 ಕೋಟಿ, ಬೊಮ್ಮನಹಳ್ಳಿಯ ಕೆಸಿಡಿಸಿ ಘಟಕದ ವ್ಯಾಪ್ತಿಯ ಅಭಿವೃದ್ಧಿಗೆ ₹1.59 ಕೋಟಿಗೆ ಟೆಂಡರ್‌ ಆಹ್ವಾನಿಸಲಾಗಿದೆ.