ಮಳೆ ಹಾನಿ ಪ್ರದೇಶಕ್ಕೆ ಪಾಲಿಕೆ ಆಯುಕ್ತ ಭೇಟಿ; ಪರಿಶೀಲನೆ

| Published : May 22 2024, 12:58 AM IST

ಮಳೆ ಹಾನಿ ಪ್ರದೇಶಕ್ಕೆ ಪಾಲಿಕೆ ಆಯುಕ್ತ ಭೇಟಿ; ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ಇನ್ನಿತರ ಕಾಮಗಾರಿ ಕೈಗೆತ್ತಿಕೊಂಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.

ಹುಬ್ಬಳ್ಳಿ:

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಹಾನಿ ಉಂಟಾದ ವಾರ್ಡ್‌ ನಂ. 36ರ ವ್ಯಾಪ್ತಿಯ ವಿವಿಧ ಪ್ರದೇಶಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿದರು.

ಈ ವೇಳೆ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಣಕಲ್‌ ಸಂತೆ ಬಯಲು ಬಳಿ ಇರುವ ಚರಂಡಿ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್‌ ನಿರ್ಮಿಸಿದ್ದರಿಂದ ಕೊಳಚೆ ನೀರು ಕಟ್ಟಿಕೊಂಡಿದೆ. ಇದರಿಂದ ನೀರು ಹರಿಯದ ಕಾರಣದಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಒಳಚರಂಡಿ ಚೇಂಬರ್‌ ತುಂಬಿ, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವ ಬಗ್ಗೆ ಆಯುಕ್ತರ ಗಮನಕ್ಕೆ ತಂದರು. ಕೆಲವೆಡೆ ಜೆಸಿಬಿಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿರುವುದನ್ನು ಆಯುಕ್ತರು ವೀಕ್ಷಿಸಿ ಕೆಲವೊಂದಿಷ್ಟು ಸಲಹೆ-ಸೂಚನೆ ನೀಡಿದರು.

ನಂತರ ಶ್ರೀನಗರದಲ್ಲಿ ಮಳೆ ನೀರು ನುಗ್ಗಿದ್ದರಿಂದ ಮನೆ, ಶಾಲೆ ಆವರಣ ಹಾನಿಯಾಗಿದ್ದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಲಾದಲ್ಲಿ ವಿದ್ಯುತ್‌ ಕಂಬಗಳಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಅಲ್ಲದೇ, ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ಇನ್ನಿತರ ಕಾಮಗಾರಿ ಕೈಗೆತ್ತಿಕೊಂಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಡಾ. ಆಚಾರ್ಯ, ಮಲ್ಲಿಕಾರ್ಜುನ ಮೆಣಸಿಕಾಯಿ, ಜ್ಯೋತಿ ದೇಸಾಯಿ, ರಾಜೇಂದ್ರ ದೊಡ್ಡವಾಡ, ಪ್ರಕಾಶ ಸೇರಿದಂತೆ ಇತರರು ಇದ್ದರು.