ಕನ್ನಡಪ್ರಭ ವಾರ್ತೆ ಹಾಸನ

ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಕಟ್ಟಿನಕೆರೆ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ನಿರ್ಮಿಸಲಾಗಿದ್ದ ಅನಧಿಕೃತ ಗೂಡಂಗಡಿಗಳ ವಿರುದ್ಧ ಗಡುವು ನೀಡಿದಂತೆ ಮಹಾನಗರಪಾಲಿಕೆ ಮಂಗಳವಾರ ಜೆಸಿಬಿಯೊಂದಿಗೆ ದಿಢೀರ್ ತೆರವು ಕಾರ್ಯಾಚರಣೆ ನಡೆಸಿತು.

ಕಳೆದ ಹಲವು ತಿಂಗಳಿಂದ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಸಂಕುಚಿತವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ತೊಂದರೆ ಅನುಭವಿಸುತ್ತಿದ್ದರು. ಇನ್ನು ಯುಜಿಡಿ ಕಟ್ಟಿಕೊಂಡಿರುವುದು ಗೊತ್ತಾಗದ ರೀತಿ ಬಂದ್ ಮಾಡಲಾಗಿತ್ತು. ಪಾಲಿಕೆಯಿಂದ ನೀಡಿರುವ ಮಳಿಗೆಗಿಂತ ಮುಂದೆ

ರಸ್ತೆ ಬದಿಗೆ ಅಂಗಡಿ ಒತ್ತುವರಿ ಮಾಡಲಾಗಿತ್ತು. ಇನ್ನೂ ಪ್ಲಾಸ್ಟಿಕ್ ಟಾರ್ಪಲನ್ನು ರಸ್ತೆ ಮುಚ್ಚುವಂತೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಇಂಜಿನಿಯರ್ ಕವಿತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಅಧಿಕಾರಿಗಳು ಕ್ರಮಕ್ಕೆ ಮುಂದಾದರು. ಇನ್ನು ಕೆಲವರು ತಾವೆ ಸ್ವಯಂ ಪ್ರೇರಿತವಾಗಿ ತೆರವು ಮಾಡುವ ಭರವಸೆ ನೀಡಿದಾಗ ಅವಕಾಶ ನೀಡಲಾಯಿತು. ಈ ವೇಳೆ ಕೆಲ ವ್ಯಾಪಾರಸ್ತರು ವಿರೋಧ ವ್ಯಕ್ತಪಡಿಸಿದರು.

ಪಾಲಿಕೆ ಇಂಜಿನಿಯರ್ ಕವಿತಾ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಸ್ತೆ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಪೂರ್ವ ಸೂಚನೆ ನೀಡಲಾಗಿದ್ದು, ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಗಡುವು ಸಹ ನಿಗದಿ ಮಾಡಲಾಗಿತ್ತು. ಆದರೆ ಸೂಚಿಸಿದ ಅವಧಿಯೊಳಗೆ ಕೆಲ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ಆದರೆ ಇನ್ನಷ್ಟು ಅಂಗಡಿಗಳ ಒತ್ತುವರಿ ತೆರವುಗೊಳಿಸದ ಹಿನ್ನೆಲೆ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮಾರುಕಟ್ಟೆಗೆ ದಿನನಿತ್ಯ ಸಾವಿರಾರು ಜನರು ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಒತ್ತುವರಿ ಕಾರಣದಿಂದಾಗಿ ತುರ್ತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿತ್ತು. ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆಯಲು ಅವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರ ಅನೇಕ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.


ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿನ ಇತರೆ ಪ್ರಮುಖ ರಸ್ತೆಗಳಲ್ಲಿ ಸಹ ಒತ್ತುವರಿ ತೆರವು ಕಾರ್ಯಾಚರಣೆ ಹಂತ ಹಂತವಾಗಿ ಮುಂದುವರಿಯಲಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರಪಾಲಿಕೆ ಎಚ್ಚರಿಕೆ ನೀಡಿದೆ. ನಗರವನ್ನು ಸುಗಮ ಸಂಚಾರ ಹಾಗೂ ಶಿಸ್ತಿನ ವ್ಯಾಪಾರ ವಾತಾವರಣಕ್ಕೆ ತರುವ ಉದ್ದೇಶದಿಂದ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.

ಈ ಒತ್ತುವರಿ ಕಾರ್ಯಾಚರಣೆ ಮಾಡುವಾಗ ರಾಜಕೀಯದಿಂದ ಕೆಲ ಕರೆಗಳ ಮೂಲಕ ಒತ್ತಡ ಬಂದು ನಮ್ಮ ಕಾರ್ಯಾಚರಣೆಗೆ ಅಡಚಣೆ ಮಾಡುತ್ತಿರುವುದಾಗಿ ಹೇಳಿದರು.

ನಮಗೆ ಮಾಧ್ಯಮದವರ ಮೇಲೆ ಗೌರವವಿದೆ. ಆದರೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಯಾರ್‍ಯಾರದೋ ಬಳಿ ಹೋಗಿ ಹೇಳಿಕೆ ಪಡೆದು ತಾಕತ್ತು ಇಲ್ಲವೇ ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಕೆಲ ಸಾಮಾಜಿಕ ಜಾಲತಾಣದಲ್ಲಿ ಏಕಪಕ್ಷೀಯವಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ನಮಗೂ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ವೃತ್ತಿ ಇಲ್ಲದೇ ಕೆಲವರಿಂದ ಈ ಕೆಲಸ ಮಾಡಿ ಕಾರು ಪಡೆದು, ಕಂದಾಯ ಕಟ್ಟದೆ ಐಶಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ದೂರು ನೀಡುವುದಾಗಿ ಎಚ್ಚರಿಸಿದರು