ಪದೇ ಪದೇ ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರೂ, ಕೆಲವರು ಅದನ್ನು ನಿರ್ಲಕ್ಷಿಸಿ ಮತ್ತೂ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವುದನ್ನು ಬಿಡುತ್ತಿಲ್ಲ.
ಧಾರವಾಡ:
ಪದೇ ಪದೇ ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರೂ, ಕೆಲವರು ಅದನ್ನು ನಿರ್ಲಕ್ಷಿಸಿ ಮತ್ತೂ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವುದನ್ನು ಬಿಡುತ್ತಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ಅಂತಹವರಿಗೆ ಪಾಠ ಕಲಿಸಲು ಸಿದ್ಧವಾಗಿದೆ.ನಗರದ ತಪೋವನ ರಸ್ತೆ ಬದಿಯಲ್ಲಿ ಕಸ ಬಿಸಾಡುತ್ತಿರುವಾಗ ನೇರವಾಗಿ ಪಾಲಿಕೆ ಸಿಬ್ಬಂದಿಗಳಿಗೆ ಸಿಕ್ಕಿಬಿದ್ದಿದ್ದು, ಕಸ ಚೆಲ್ಲಿದವರ ಮನೆ ಎದುರೇ ಕಸ ಚೆಲ್ಲುವ ಮೂಲಕ ಪಾಲಿಕೆ ಅಧಿಕಾರಿಗಳ ಪಾಠ ಕಲಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಕಸ ಚೆಲ್ಲಬೇಡಿ ಎಂದು ಪಾಲಿಕೆ ಸಿಬ್ಬಂದಿ ಹೇಳಲು ಹೋದಾಗ ತಪೋವನ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ನಿವಾಸಿಗಳು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದಾಗಿ ಪಾಲಿಕೆ ಸಿಬ್ಬಂದಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲೇ ಟ್ರ್ಯಾಕ್ಟರ್‌ನಲ್ಲಿ ಕಸ ತಂದು ಸುರಿದಿದ್ದಾರೆ. ನಗರದಲ್ಲಿ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲು ಆಟೋ ಟಿಪ್ಪರ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಪಾಲಿಕೆಯಲ್ಲಿ ಕಂಟ್ರೋಲ್ ರೂಮ್ ಕೂಡ ಕಾರ್ಯನಿರ್ವಹಿಸುತ್ತಿದೆ. ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ರಸ್ತೆ ಬದಿಯಲ್ಲಿ ಕಸ ಸುರಿಯುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮಾಡಿರುವ ಕಾರ್ಯವನ್ನು ಪರಿಸರ ಪ್ರಿಯರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಸುರಿಯದೆ, ಮನೆ-ಮನೆಗೆ ಬರುವ ಆಟೋ ಟಿಪ್ಪರ್ ವಾಹನಗಳಿಗೆ ತ್ಯಾಜ್ಯ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಪಾಲಿಕೆಯ ಕಂಟ್ರೋಲ್ ರೂಮ್‌ಗೆ ದೂರು ಸಲ್ಲಿಸಬೇಕು. ಪ್ರತಿಯೊಬ್ಬರೂ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸಿ, ನಗರದ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು. ಅದಾಗಿಯೂ ಸಾರ್ವಜನಿಕರು ಇದೇ ರೀತಿ ರಸ್ತೆ ಬದಿಯಲ್ಲಿ, ಖಾಲಿ ಜಾಗಗಳಲ್ಲಿ ಮತ್ತು ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಕಸವನ್ನು ಚೆಲ್ಲುವುದು ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು. ದಂಡ ಭರಿಸಲು ಸಾಧ್ಯವಾಗದೆ ಇದ್ದಲ್ಲಿ, ಇದೇ ರೀತಿ ಕಸವನ್ನು ತಂದು ಮನೆ, ಅಪಾರ್ಟ್‌ಮೆಂಟ್ ಮತ್ತು ಅಂಗಡಿಗಳ ಮುಂದೆ ತಂದು ಸುರಿಯಲಾಗುವುದು ಎಂದು ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಳ್ಳಿ ಎಚ್ಚರಿಸಿದ್ದಾರೆ.ಈ ವೇಳೆ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಜ್ಯೋತಿ ಚುಳಕಿಮಠ, ಮೇಲ್ವಿಚಾರಕ ಪವನ ಸಗಬಾಲ್, ನೇತ್ರಾ ಕಡಕೋಳ ಇದ್ದರು.