ಬಿಬಿಎಂಪಿ : ನೀರಿಗಾಗಿ ನೀಡಿದ ₹4 ಕೋಟಿ ಅನುದಾನ ಹಿಂಪಡೆದ ಪಾಲಿಕೆ

| Published : May 07 2024, 02:00 AM IST / Updated: May 07 2024, 12:05 PM IST

ಸಾರಾಂಶ

ದಾಸರಹಳ್ಳಿ ನಮ್ಮ ಕ್ಷೇತ್ರಕ್ಕೆ ನೀರಿಗಾಗಿ 4 ಕೋಟಿ ರು.ಹಣ ಬಿಡುಗಡೆ ಮಾಡಿದ್ದ ಪಾಲಿಕೆ ಆಯುಕ್ತರು ಟೆಂಡರ್ ಕರೆಯುವ ಮುನ್ನವೇ ಹಿಂಪಡೆದಿದ್ದಾರೆ ಎಂದು ಶಾಸಕ ಎಸ್. ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

 ಪೀಣ್ಯ  : ದಾಸರಹಳ್ಳಿನಮ್ಮ ಕ್ಷೇತ್ರಕ್ಕೆ ನೀರಿಗಾಗಿ 4 ಕೋಟಿ ರು.ಹಣ ಬಿಡುಗಡೆ ಮಾಡಿದ್ದ ಪಾಲಿಕೆ ಆಯುಕ್ತರು ಟೆಂಡರ್ ಕರೆಯುವ ಮುನ್ನವೇ ಹಿಂಪಡೆದಿದ್ದಾರೆ ಎಂದು ಶಾಸಕ ಎಸ್. ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

ಶೆಟ್ಟಿಹಳ್ಳಿ ವಾರ್ಡ್ ಚಿಕ್ಕಸಂದ್ರದಲ್ಲಿ ಪಿಜಿಗಳಿಗೆ ಅಕ್ರಮ ನೀರು ಸರಬರಾಜು ಆಗುತ್ತಿದ್ದನ್ನು ತಡೆದು, ಇನ್ನೂ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಮತ್ತು ಜನರ ಕುಂದುಕೊರತೆ ಆಲಿಸಿ ಮಾತನಾಡಿದರು.

ನಮ್ಮಲ್ಲಿ ನೀರಿನ ಹಾಹಾಕಾರವಿದೆ. ಬೇರೆ ಕ್ಷೇತ್ರಗಳಿಗೆ 8 ಕೋಟಿ ರು. ಮತ್ತು 9 ಕೋಟಿ ರು.ನೀಡಿದ್ದಾರೆ. ನಮಗೆ 4 ಕೋಟಿ ರು.ಕೊಟ್ಟಿದ್ದಾರೆ. ಕಾವೇರಿ ನೀರು 12 ದಿನಕೊಮ್ಮೆ ಕೊಡ್ತಾ ಇದ್ದಾರೆ. ಹೆಣ್ಣು ಮಕ್ಕಳು ನೀರಿಗಾಗಿ ನಿತ್ಯ ದೂರುಗಳನ್ನು ನೀಡುತ್ತಿದ್ದಾರೆ. ಇಂತಹ ಸಮಸ್ಯೆಗೆ ಪ್ರತಿದಿನ ಒಂದೊಂದು ಭಾಗಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಸರ್ಕಾರವು ಸಹ ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಅಸ್ತ್ರ ಮಾತ್ರ ಉಳಿದಿದೆ ಎಂದು ಎಚ್ಚರಿಕೆ ನೀಡಿದರು.

ಈ ಭಾಗದಲ್ಲಿ 100ಕ್ಕೂ ಹೆಚ್ಚು ಪಿಜಿಗಳಿವೆ. ಪಿಜಿ ಮಾಲೀಕರು ಅಕ್ರಮವಾಗಿ ಕೊಳವೆ ಬಾವಿ ನೀರನ್ನು ಪಡೆಯುತ್ತಿದ್ದಾರೆ. ಅದನ್ನು ಪರಿಶೀಲಿಸಿ ಕೊಳವೆ ಬಾವಿ ನೀರನ್ನು ಬಿಡದಂತೆ ವಾಟರ್ ಮ್ಯಾನ್‌ಗಳಿಗೆ ಎಚ್ಚರಿಕೆ ನೀಡಿದರು.

ನೀರಿನ ಸಮಸ್ಯೆ ಬಹಳಷ್ಟಿದೆ. ಮುಖ್ಯಮಂತ್ರಿಗಳಿಗೆ, ಡಿಸಿಎಂ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದು ಬೇಜವಾಬ್ದಾರಿ ಸರ್ಕಾರ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಶೆಟ್ಟಿಹಳ್ಳಿ ಸುರೇಶ್, ಬಿಜೆಪಿ ಮುಖಂಡರುಗಳಾದ ದಯಾನಂದ, ಪಾಂಡುರಂಗ, ಕಿರಣ್‌ಕುಮಾರ್, ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿ ಗಳು, ಸೋದೆನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಎಇಇ ಕೃಷ್ಣಮೂರ್ತಿ ಇನ್ನೂ ಮುಂತಾದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು