ಸಾರಾಂಶ
ಹುಬ್ಬಳ್ಳಿ : ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ ಕಾಲೇಜು ಆವರಣದಲ್ಲೇ ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಕೆಎಲ್‌ಇ ಬಿವಿಬಿ ಕಾಲೇಜ್ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ.
ಕೊಲೆ ಮಾಡಿ ಪರಾರಿಯಾಗುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇಡೀ ನಗರವನ್ನೇ ತಲ್ಲಣಗೊಳಿಸಿದ್ದು, ವಿದ್ಯಾರ್ಥಿ ಸಮೂಹ ಬೆಚ್ಚಿ ಬಿದ್ದಿದೆ.ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ಎಂಬುವಳೇ ಕೊಲೆಯಾದ ವಿದ್ಯಾರ್ಥಿನಿ. ಈಕೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ. ಅದೇ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಫಯಾಜ್ ಎಂಬಾತನೇ ಕೊಲೆ ಮಾಡಿದವನು.
ಈತ ಹಾಗೂ ನೇಹಾ ಇಬ್ಬರು ಬಿಸಿಎ ಓದುವಾಗ ಸಹಪಾಠಿಗಳಾಗಿದ್ದರಂತೆ. ಈತ ಬಿಸಿಎನಲ್ಲಿ ಅನುತ್ತೀರ್ಣನಾಗಿದ್ದನಂತೆ. ಆದರೆ ನೇಹಾ ಉತ್ತೀರ್ಣಳಾಗಿ ಎಂಸಿಎ ಮಾಡುತ್ತಿದ್ದಳು. ಬೆಳಗಾವಿ ಜಿಲ್ಲೆಯ ಸವದತ್ತಿಯ ಮೂಲದವನಾದ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆಗಿದ್ದೇನು?: ನೇಹಾ ಗುರುವಾರ ಸಂಜೆ ತರಗತಿ ಮುಗಿಸಿಕೊಂಡು ಮನೆಗೆ ಹೊರಡುತ್ತಿದ್ದಾಗ ಕಾಲೇಜು ಕ್ಯಾಂಪಸ್‌ನಲ್ಲೇ ಮಾಸ್ಕ್ ಹಾಕಿಕೊಂಡು ಬಂದ ಫಯಾಜ್, ನೇಹಾ ಮೇಲೆ ಮನ ಬಂದಂತೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿಗೆ ಬರೋಬ್ಬರಿ 9 ಬಾರಿ ಇರಿದು ಚಾಕು ಅಲ್ಲೇ ಎಸೆದು ಪರಾರಿಯಾಗಿದ್ದಾನೆ.
ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇಹಾಳನ್ನು ಕಾಲೇಜು ಆವರಣದಲ್ಲಿಯೇ ಇದ್ದ ವಿದ್ಯಾರ್ಥಿಗಳು ಎತ್ತಿಕೊಂಡು ವಾಹನವೊಂದರಲ್ಲಿ ಕಿಮ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ.
ಅರ್ಧಗಂಟೆಯಲ್ಲೇ ಬಂಧನ: ಈ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಪೊಲೀಸರು, ತಕ್ಷಣವೇ ನಗರದಲ್ಲೆಲ್ಲ ಹುಡುಕಾಡಿದ್ದಾರೆ. ಕಿಮ್ಸ್ ಹಿಂಬದಿಯಲ್ಲಿ ಅವಿತುಕೊಂಡಿದ್ದ ಫಯಾಜ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಅರ್ಧಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೀತಿಗೆ ನಿರಾಕರಣೆ ಕೊಲೆ?: ಫಯಾಜ್ ಕಳೆದ ಕೆಲವು ದಿನಗಳಿಂದ ನೇಹಾಳಿಗೆ ಪ್ರೀತಿಸುವಂತೆ ಕೇಳಿಕೊಂಡಿದ್ದನಂತೆ. ಆದರೆ, ಆಕೆ ಆತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳೆನ್ನಲಾಗಿದೆ. ಇದೇ ಕಾರಣಕ್ಕೆ ಅವಳನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಸುದ್ದಿ ತಿಳಿದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾವಿಸಿದ ತಂದೆ ಹಾಗೂ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹಾಗೂ ಕುಟುಂಬಸ್ಥರು ನೇಹಾ ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ವಿಷಯ ಕೇಳಿ ಕುಸಿದು ಬಿದ್ದರು. ಮಗಳನ್ನು ಕಳೆದುಕೊಂಡ ತಂದೆ, ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಅವರ ಬಂಧು- ಬಳಗದವರು ಕಿಮ್ಸ್ ಆವರಣದಲ್ಲಿ ಜಮಾಯಿಸಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿದರು.
ಬೆಚ್ಚಿಬಿದ್ದ ಸಹಪಾಠಿಗಳು: ತರಗತಿ ಮುಗಿಸಿಕೊಂಡು ಮನೆಗೆ ಹೊರಟಿದ್ದ ವಿದ್ಯಾರ್ಥಿಗಳ ಎದುರಿನಲ್ಲೇ ನಡೆದ ಈ ಭೀಕರ ಕೃತ್ಯ ಅವರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಏಕಾಏಕಿ ಚಾಕುವಿನಿಂದ ನೇಹಾಳಿಗೆ ಇರಿಯುವುದನ್ನು ಕಂಡು ಕೆಲ ವಿದ್ಯಾರ್ಥಿನಿಯರು ಅಲ್ಲಿಯೇ ಮೂರ್ಚೆ ಬಿದ್ದಿದ್ದಾರಲ್ಲದೇ, ಕೈಕಾಲುಗಳಲ್ಲಿ ನಡುಕ ಹುಟ್ಟಿ ಮನೆಗೆ ಹೋಗಲು ಆಗದೇ ಪಾಲಕರನ್ನು ಕಾಲೇಜಿಗೆ ಕರೆಯಿಸಿ ಅವರೊಂದಿಗೆ ಮನೆಗೆ ತೆರಳಿದ್ದಾರೆ. ಘಟನೆಯನ್ನು ಕಣ್ಣಾರೆ ನೋಡಿದ ಕೆಲ ವಿದ್ಯಾರ್ಥಿನಿಯರಿಗೆ ಜ್ವರ ಕೂಡಾ ಬಂದಿದೆ ಎಂದು ಹೇಳಲಾಗುತ್ತದೆ.
ಎಬಿವಿಪಿ ಪ್ರತಿಭಟನೆ :ನೇಹಾ ಕೊಲೆ ಘಟನೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಸಂಜೆ ಬಿವಿಬಿ ಕಾಲೇಜ್ ಎದುರಿಗೆ ಬೃಹತ್ ಪ್ರತಿಭಟನೆ ನಡೆಸಿದರು. ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))