ಆಸ್ತಿ ಖಾತೆಯಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ

| Published : Feb 24 2025, 12:34 AM IST

ಸಾರಾಂಶ

ಪೌರಾಡಳಿತ ನಿರ್ದೇಶನಾಲಯವು ಆಸ್ತಿ ಕಣಜ ತಂತ್ರಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೆ ಇ-ಆಸ್ತಿ ಖಾತೆಗಳನ್ನು ಹೊಂದಿರುವವರು ತಮ್ಮ ಆಸ್ತಿ ಖಾತೆ ಪ್ರತಿಗಳಲ್ಲಿ ದೋಷ, ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಪಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ತಿಳಿಸಿದರು.

ಅರಕಲಗೂಡು: ಪೌರಾಡಳಿತ ನಿರ್ದೇಶನಾಲಯವು ಆಸ್ತಿ ಕಣಜ ತಂತ್ರಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೆ ಇ-ಆಸ್ತಿ ಖಾತೆಗಳನ್ನು ಹೊಂದಿರುವವರು ತಮ್ಮ ಆಸ್ತಿ ಖಾತೆ ಪ್ರತಿಗಳಲ್ಲಿ ದೋಷ, ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಪಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ತಿಳಿಸಿದರು.

ಪಪಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥದಲ್ಲಿ ಮಾತನಾಡಿ, ಇ-ಖಾತೆ ಪ್ರತಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಸ್ವತ್ತಿನ ಮತ್ತು ಮಾಲೀಕರ ಭಾವಚಿತ್ರ, ಗುರುತು ಪತ್ರ (ವೋಟರ್ ಐಡಿ, ಪಡಿತರ ಚೀಟಿ ಪ್ರತಿ),ಆಧಾರ್, ಪಾನ್ ಕಾರ್ಡ್, ಕಂದಾಯ ಪಾವತಿ ರಶೀದಿ, ವಿದ್ಯುತ್ ಬಿಲ್, ನೀರಿನ ಬಿಲ್ ಮುಂತಾದ ದಾಖಲೆಗಳ ಪ್ರತಿಗಳೊಂದಿಗೆ ಪಪಂ ಕಚೇರಿಗೆ ಫೆ. 25 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಿದರು. ಮುಖ್ಯಾಧಿಕಾರಿ ಬಸವರಾಜಪ್ಪ ಟಾಕಪ್ಪ ಶಿಗ್ಗಾಂವಿ ಮಾತನಾಡಿ, ಆಸ್ತಿ ಖಾತೆದಾರರು ಅಂತರ್ಜಾಲದಲ್ಲಿ ಕೆಎಂಎಫ್-24 ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಸಿಟಿಜನ್ ಭಾಗದಲ್ಲಿರುವ ಪ್ರತಿಯೊಂದಿಗೆ ನಿಮ್ಮಲ್ಲಿರುವ ಪ್ರತಿಯನ್ನು ತಾಳೆ ನೋಡಿ ತಪ್ಪು, ದೋಶಗಳನ್ನು ಗುರುತಿಸಿ ತಪ್ಪುಗಳಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ತಿದ್ದುಪಡಿ ಮಾಡಲಾಗುವುದು. ಕಾಲಾವಕಾಶ ಕಡಿಮೆ ಇದ್ದು ಜನರು ತ್ವರಿತವಾಗಿ ಈ ಕುರಿತು ಗಮನ ನೀಡಿ ತಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಸದಸ್ಯರಾದ ಹೂವಣ್ಣ,ರಶ್ಮೀಮಂಜುನಾಥ್, ಲಕ್ಷ್ಮೀ, ನಾರಾಯಣಸ್ವಾಮಿ, ದೀಕ್ಷಿತ್ ಇದ್ದರು.