ಅದಲು ಬದಲಾದ ಸರ್ವೆ ನಂಬರ್ ಸರಿಪಡಿಸಲು ರೈತರ ಆಗ್ರಹ

| Published : Jul 22 2025, 12:00 AM IST

ಅದಲು ಬದಲಾದ ಸರ್ವೆ ನಂಬರ್ ಸರಿಪಡಿಸಲು ರೈತರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ತರಲಕಟ್ಟಿ ಗ್ರಾಮದ ರೈತರ ಜಮೀನುಗಳ ಪಹಣಿಯಲ್ಲಿನ ಸರ್ವೆ ನಂಬರ್ ಅದಲು ಬದಲಾಗಿದ್ದು, ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಪಟ್ಟಣದ ತಹಸಿಲ್ ಕಚೇರಿ ಆವರಣದ ಮುಂಭಾಗ ಸೋಮವಾರ ಧರಣಿ ನಡೆಸಿದರು.

ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ತರಲಕಟ್ಟಿ ಗ್ರಾಮದ ರೈತರ ಜಮೀನುಗಳ ಪಹಣಿಯಲ್ಲಿನ ಸರ್ವೆ ನಂಬರ್ ಅದಲು ಬದಲಾಗಿದ್ದು, ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಪಟ್ಟಣದ ತಹಸಿಲ್ ಕಚೇರಿ ಆವರಣದ ಮುಂಭಾಗ ಸೋಮವಾರ ಧರಣಿ ನಡೆಸಿದರು.

ಗ್ರಾಮದ ಸರ್ವೆ ನಂ. ೩೫ರಲ್ಲಿರುವ ೧೨ ಎಕರೆ ಜಮೀನು ೩೧ನೇ ಸರ್ವೆ ನಂಬರ್‌ಗೆ ಸೇರ್ಪಡೆಯಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ೩೧ರ ಬದಲಾಗಿ ೩೫ಕ್ಕೆ ಸೇರ್ಪಡೆ ಮಾಡುವಂತೆ ಸಾಕಷ್ಟು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲದ ನೆಪ ಹೇಳಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸ.ನಂ. ೩೫ರಲ್ಲಿ ೨೦ಕ್ಕೂ ಹೆಚ್ಚು ರೈತರ ಜಮೀನುಗಳಿದ್ದು, ಸರ್ಕಾರದ ಬೆಳೆವಿಮೆ, ಬೆಳೆಹಾನಿ, ಬ್ಯಾಂಕ್ ಸಾಲ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ತಹಸಿಲ್ ಕಚೇರಿಗೆ ಅಲೆದರೂ ಕೆಲಸವಾಗಿಲ್ಲ. ಈ ಕುರಿತು ಶಾಸಕ ಬಸವರಾಜ ರಾಯರಡ್ಡಿ ಅವರ ಗಮನಕ್ಕೆ ತಂದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

೩೧ನೇ ಸರ್ವೆ ನಂಬರ್‌ಗೆ ಸೇರ್ಪಡೆಯಾದ ಜಮೀನನ್ನು ೩೫ನೇ ಸರ್ವೆ ನಂಬರ್‌ಗೆ ವರ್ಗಾಯಿಸಿಕೊಡುವ ಜತೆಗೆ ರೈತರಿಗೆ ಫಾರಂ ನಂ. ೧೦ ಮಾಡಿಕೊಡುವ ವ್ಯವಸ್ಥೆಯಾಗಬೇಕು. ಇನ್ನಾದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದರೆ ಧರಣಿ ಮುಂದುವರಿಸುವುದಾಗಿ ಧರಣಿನಿರತ ರೈತರಾದ ಶರಣಪ್ಪ ಹುಳ್ಳಿ, ಸೋಮನಾಥ ಹುಳ್ಳಿ, ಶಂಕ್ರಪ್ಪ ಕಂಬಳಿ, ಶರಣಪ್ಪ ಹುಳ್ಳಿ, ನಿರೂಪಾದಿ, ಹನುಮಂತಪ್ಪ ಕಂಬಳಿ, ಕರೇಗೌಡ ಕಂಬಳಿ, ಮಂಜುನಾಥ, ಮಲ್ಲಪ್ಪ ಕಂಬಳಿ, ವಿಠೋಬ ಇನ್ನಿತರರು ಎಚ್ಚರಿಕೆ ನೀಡಿದರು.