ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ. ಸಂಪುಟದಲ್ಲೂ ಬಂಜಾರರಿಗೆ ಸ್ಥಾನ ನೀಡಿಲ್ಲ. ಈ ನಿರ್ಲಕ್ಷ್ಯ ಖಂಡಿಸಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.14 ಮತ್ತು 15ರಂದು ಆಚರಿಸುವ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಸರ್ಕಾರದ ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಲಾಗುವುದು ಎಂದು ಬಂಜಾರರ ಒಳಮೀಸಲಾತಿ ವಿರುದ್ಧದ ಹೋರಾಟ ಸಮಿತಿ ಮುಖಂಡರು ಹೇಳಿದ್ದಾರೆ.
- ಸೇವಾಲಾಲ್ ಜಯಂತಿ ವೇಳೆ ಸರ್ಕಾರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ: ಎಚ್ಚರಿಕೆ - - -
ದಾವಣಗೆರೆ: ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ. ಸಂಪುಟದಲ್ಲೂ ಬಂಜಾರರಿಗೆ ಸ್ಥಾನ ನೀಡಿಲ್ಲ. ಈ ನಿರ್ಲಕ್ಷ್ಯ ಖಂಡಿಸಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.14 ಮತ್ತು 15ರಂದು ಆಚರಿಸುವ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಸರ್ಕಾರದ ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಲಾಗುವುದು ಎಂದು ಬಂಜಾರರ ಒಳಮೀಸಲಾತಿ ವಿರುದ್ಧದ ಹೋರಾಟ ಸಮಿತಿ ಮುಖಂಡರು ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲೇಕಲ್ಲು ಮಂಜಾನಾಯ್ಕ, ಸೂರಗೊಂಡನಕೊಪ್ಪದಲ್ಲಿ ಅಂದು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಸಮಾಜದ ನಾಯಕ್, ಡಾವ್, ಕಾರ್‌ಬಾರಿಗಳು ಒಪ್ಪಿದ್ದಾರೆ. ಧಾರ್ಮಿಕ ಆಚರಣೆಗಳಿಗೆ ನಮ್ಮ ಬೆಂಬಲವಿದೆ. ಆದರೆ, ಸರ್ಕಾರದಿಂದ ನಡೆಯುವ ವೇದಿಕೆ ಕಾರ್ಯಕ್ರಮ ಬಹಿಷ್ಕರಿಸುವ ಜೊತೆಗೆ ಸಿಎಂ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಕಪ್ಪುಬಟ್ಟೆ ಪ್ರದರ್ಶಿಸುವಂತೆ ಸಮಾಜ ಬಾಂಧವರಿಗೆ ತಿಳಿಸುತ್ತಿದ್ದೇವೆ ಎಂದರು.
ಶ್ರೀ ಸೇವಾಲಾಲ್ ಜಯಂತಿಯಂದೇ ಕಾಂಗ್ರೆಸ್ ಹಠಾವೋ, ಬಂಜಾರ ಬಚಾವೋ ಹೋರಾಟವನ್ನು ನಡೆಸುವ ಜೊತೆಗೆ ಕಾಂಗ್ರೆಸ್ ಸರ್ಕಾರದ ಜನಪ್ರತಿನಿಧಿಗಳಿಗೂ ಅಂದು ಸೂರಗೊಂಡನಕೊಪ್ಪದಲ್ಲಿ ಘೇರಾವ್ ಮಾಡಲಿದ್ದೇವೆ. ಒಳ ಮೀಸಲಾತಿ ವಿಚಾರದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಸಿ ಗುಂಪಿಗೆ ಸೇರಿಸಿ ಕಾಂಗ್ರೆಸ್ ಸರ್ಕಾರ ಬಂಜಾರರಿಗೆ ದೊಡ್ಡ ಹೊಡೆತವನ್ನೇ ನೀಡಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರಕ್ಕೆ ಸೇವಾಲಾಲ್ ಜಯಂತ್ಯುತ್ಸವ ನಡೆಯುವ ಫೆ.14 ಮತ್ತು 15ರವರೆಗೂ ಕಾಲಾವಕಾಶ ನೀಡಲಾಗುವುದು. ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಆರಂಭಿಸಲಾಗುವುದು. ಸೇವಾಲಾಲ್ ಮಾಲಾಧಾರಿಗಳು ಸಹ ಕಪ್ಪುಪಟ್ಟಿ ಧರಿಸಿ, ಮೆರವಣಿಗೆ ನಡೆಸಲಿದ್ದಾರೆ. ಒಳಮೀಸಲಾತಿ ವಿರೋಧಿಸಿ ಸತತ 7 ತಿಂಗಳಿನಿಂದಲೂ ತಾಂಡಾ, ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಇಷದ್ಟಾದರೂ ಸರ್ಕಾರ ನಮ್ಮ ಬೇಡಿಕೆಗೆ ಕಿವಿಗೊಟ್ಟಿಲ್ಲ. ನಮ್ಮ ಮನವಿಗೆ ವಿರುದ್ಧವಾಗಿ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳಿಸಿದೆ ಎಂದು ಕಿಡಿಕಾರಿದರು.
ರಾಜ್ಯಪಾಲರು ಮಸೂದೆ ವಾಪಸ್ ಕಳಿಸಿ, ಸುಪ್ರೀಂ ಕೋರ್ಟ್ ನಿಯಮ ಉಲ್ಲಂಘನೆ ಮತ್ತು ಎಲ್ಲಾ ವರ್ಗಗಳ ಹಿತರಕ್ಷಣೆ ಕಾಪಾಡಲು ಸ್ಪಷ್ಟೀಕರಣ ಕೇಳಿದ್ದಾರೆ. ಇಂತಹ ಅವೈಜ್ಞಾನಿಕ ರೋಸ್ಟರ್ ಬಿಂದು ಹಂಚಿಕೆ ಬದಲಿಸಿ, ಸಿಂಗಲ್ ವಿಂಡೋ ಪದ್ಧತಿ ಮೂಲಕ ಉದ್ಯೋಗ ಮತ್ತು ಉನ್ನತ ಶಕ್ಷಣ ಸೀಟು ಹಂಚಿಕೆ ಆಗಬೇಕು ಎಂದು ಮುಖಂಡರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ.ಓಂಕಾರ ನಾಯ್ಕ, ಓಂಕಾರ ನಾಯ್ಕ, ಅರುಣಕುಮಾರ, ಸಂತೋಷ ನಾಯ್ಕ, ಮಿಥುನ್ ಚಕ್ರವರ್ತಿ, ಹಾಲೇಕಲ್ಲು ಚಂದ್ರನಾಯ್ಕ, ಆರ್.ಎಲ್.ಶಿವಪ್ರಕಾಶ, ಜಿ.ಮಂಜಾ ನಾಯ್ಕ ಬಸಾಪುರ ಇತರರು ಇದ್ದರು.
- - --12ಕೆಡಿವಿಜಿ4:
ಬಂಜಾರ ಸಮುದಾಯ ಮುಖಂಡ ಹಾಲೇಕಲ್ಲು ಮಂಜಾನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆರ್.ಎಲ್.ಶಿವಪ್ರಕಾಶ, ಜಿ.ಮಂಜಾನಾಯ್ಕ ಇತರರು ಇದ್ದರು.