ತಪ್ಪು ತಿದ್ದಿಕೊಳ್ಳಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ

| Published : Nov 05 2024, 12:43 AM IST

ತಪ್ಪು ತಿದ್ದಿಕೊಳ್ಳಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಬಿಜೆಪಿ ರೈತ ಮೋರ್ಚಾ ಘಟಕದಿಂದ ಗಜೇಂದ್ರಗಡ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಗಜೇಂದ್ರಗಡ: ರೈತರ ಹಾಗೂ ಸಾರ್ವಜನಿಕರ ಆಸ್ತಿ ಕಬಳಿಸಿ ವಕ್ಫ್ ಮಂಡಳಿಗೆ ಹಸ್ತಾಂತರಿಸುವ ಹುನ್ನಾರವನ್ನು ತಕ್ಷಣವೇ ಕೈ ಬಿಡಬೇಕು. ಸಾಂಕೇತಿಕ ಪ್ರತಿಭಟನೆಗೆ ಎಚ್ಚೆತ್ತುಕೊಂಡು ಸರ್ಕಾರ ತಪ್ಪು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೊಂದು ಸುತ್ತಿನ ಪ್ರತಿಭಟನೆ ಎದುರಿಸಲು ಸಿದ್ಧವಾಗಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್ಚರಿಸಿದರು.

ವಕ್ಫ್‌ ರೈತರ ಜಮೀನುಗಳನ್ನು ಕಬಳಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ಘಟಕದಿಂದ ಸ್ಥಳೀಯ ತಹಸೀಲ್ದಾರ್‌ಗೆ ಮನವಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಂತಿ, ಸಾಮರಸ್ಯದ ನಾಡಾಗಿರುವ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಕ್ಫ್ ಮಂಡಳಿಯ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ಪ್ರಧಾನಿ ಮೋದಿ ಸರ್ಕಾರ ದೇಶದ ಜನತೆ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಕಾಯ್ದೆ ಜಾರಿಯಾಗುವುದು ಖಾತ್ರಿ ಆಗುತ್ತಿದಂತೆ ವಕ್ಫ್ ಬೋರ್ಡ್ ತನ್ನ ಕೈಚಳಕ ತೋರಲು ಮುಂದಾಗಿದೆ. ಹೀಗಾಗಿ, ತಕ್ಷಣವೇ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು.

ತಹಸೀಲ್ದಾರ್‌ ವಿರುದ್ದ ಹರಿಹಾಯ್ದ ಮಾಜಿ ಸಚಿವ ಬಂಡಿ

ಸೋಮವಾರ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲು ಕಚೇರಿ ಮುಂದೆ ಬಂದು ನಿಂತರು. ಆಗ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಪೊಲೀಸರು ಪ್ರತಿಭಟನಾ ನಿರತರು ಬಂದು ನಿಂತಿರುವುದನ್ನು ತಿಳಿಸಿದರೂ ಕಚೇರಿಯಿಂದ ತಡವಾಗಿ ಬಂದರು. ಇದರಿಂದ ಕೆರಳಿದ ಮಾಜಿ ಸಚಿವ ಕಳಕಪ್ಪ ಬಂಡಿ, ತಹಸೀಲ್ದಾರ್ ನೀನೇನು? ಏನ್ ಮಲ್ಗಿದ್ದೆನು? ಏನಂತ ತಿಳ್ಕೊಂಡಿ. ಡಿಸಿ ಅವ್ರು ಹೋಗ್ಬಾಡ ಅಂತ ಹೇಳ್ಯಾರಾ? ಏಯ್ ಬಾಳ ಎಚ್ಚರಿಕೆಯಿಂದಿರು. ಏನ್ ನೀ ಸೂರ್ಯ, ಚಂದ್ರ ಇರೋವರೆಗೂ ಇರ್ತಿ ಅನ್ಕೊಂಡಿಯಾ. ಏನ್ ಈ ಸರ್ಕಾರ ಸೂರ್ಯ ಚಂದ್ರ ಇರೊವರೆಗೂ ಇರ್ತ ಅನ್ಕೊಂಡಿಯಾ? ಕಾಮನ್ ಸೆನ್ಸ್ ಇಲ್ವಾ ನಿಂಗ್ ತಾಲ್ಲೂಕಾ ಮ್ಯಾಜಿಸ್ಟ್ರೇಟ್ ಅದಿ ನೀ. ಪೊಲೀಸರು ಇಬ್ರು ಮೂವಾರು ಬಂದು ಹೇಳಕತ್ತರ ಗೊತ್ತಾಗಲ್ವಾ. ಇದೆಲ್ಲಾ ನಡೆಯಲ್ಲ. ಪ್ರತಿದಿನ ನಿನ್ನ ಮ್ಯಾಲೆ ಕಣ್ಣ ಇಡ್ಬೇಕಾಗುತ್ತ. ದುಡ್ಡ ಕೊಟ್ಟು ಪೋಸ್ಟಿಂಗ್ ಮಾಡಿಸ್ಕೊಂಡು ಬಂದಿರ್ತಿರಿ. ಮಂದಿಯಿಂದ ದುಡ್ಡು ತಗೊಳ್ಳದ ನಿಮ್ಮ ಕೆಲಸ ಇಲ್ಲ. ರೈತರ ಪ್ರತಿಭಟನೆ ಅಂದ್ರೆ ಬೆಲೆ ಇಲ್ವಾ'''''''' ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ವಿರುದ್ದ ಹರಿಹಾಯ್ದರು.

ಇದಕ್ಕೂ ಮುನ್ನ ರೋಣ ರಸ್ತೆಯ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಪತ್ರಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ರೈತ ಮೋರ್ಚಾದ ಬಾಳಾಜೀರಾವ್ ಬೊಸಲೆ, ಮುತ್ತಣ್ಣ ಕಡಗದ, ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಕನಕಪ್ಪ ಅರಳಿಗಿಡದ, ಅಶೋಕ ವನ್ನಾಲ, ಉಮೇಶ ಚನ್ನುಪಾಟೀಲ, ಆರ್.ಕೆ. ಚವ್ಹಾಣ, ಶ್ರೀನಿವಾಸ ಸವದಿ, ಬುಡ್ಡಪ್ಪ ಮೂಲಿಮನಿ, ಕುಮಾರ ರಾಠೋಡ ಸೇರಿ ಇತರರು ಇದ್ದರು.