ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭಾ ವ್ಯಾಪ್ತಿಯಲ್ಲಿರುವ ಐಡಿಎಸ್‌ಎಂಟಿ ಯೋಜನೆ ಸೇರಿದಂತೆ ಇತರೆ ಅನುದಾನದಲ್ಲಿ ನಿರ್ಮಿಸಲಾದ ಮಳಿಗೆಗಳ ಬಾಡಿಗೆಯನ್ನು 15 ದಿನದೊಳಗೆ ಮೂಲ ಬಾಡಿಗೆದಾರಿಂದ ಮುಲಾಜಿಲ್ಲದೆ ವಸೂಲಿ ಮಾಡಲು ನಗರಸಭೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸ್ಥಳೀಯ, ಜಿಲ್ಲಾ ಹಾಗೂ ಬೆಂಗಳೂರು ಕೋರ್ಟ್ ಹಂತದ ವ್ಯಾಜ್ಯಗಳ ಇತ್ಯರ್ಥಕ್ಕೆ ಕಾನೂನು ಸಲಹೆಗಾರರನ್ನಾಗಿ ಮೂರು ಮಂದಿ ವಕೀಲರನ್ನು ತಕ್ಷಣ ನೇಮಿಸಿಕೊಳ್ಳಬೇಕು. 24 ಗಂಟೆ ಕುಡಿಯುವ ನೀರಿನ ಯೋಜನೆಯ ಬಾಕಿ ಇರುವ ಕಾಮಗಾರಿಯನ್ನು 1 ತಿಂಗಳೊಳಗೆ ಪೂರ್ಣಗೊಳಿಸುವ ಕುರಿತು, ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಳಾಂತರಕ್ಕೆ ಮೀಟರ್ ಮೂಲಕ ಸಂಪರ್ಕ ನೀಡಿರುವ ಗ್ರಾಹಕರಿಂದ 8 ಸಾವಿರ ಲೀ. ನೀರಿಗೆ 56 ರು. ಶುಲ್ಕ ನಿಗದಿಗೊಳಿಸಲಾಯಿತು.
ಸಾಮಾನ್ಯ ಸಭೆಯಲ್ಲಿ 24 ಗಂಟೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಕುರಿತು ಮೊದಲಿಗೆ ಬಿಜೆಪಿ ಸದಸ್ಯ ಧರಣೀಶ್ ವಿಚಾರ ಪ್ರಸ್ತಾಪಿಸಿ ಈ ಕಾಮಗಾರಿಯಲ್ಲಿ ಸಾಕಷ್ಟು ಲೋಪವಾಗಿದೆ, ಸಾವಿರಾರು ಮಂದಿಗೆ ಸಂಪರ್ಕ ನೀಡಿಲ್ಲ, ವಾಲ್‌ಗಳು ಸಮರ್ಪಕ ರೀತಿಯಲ್ಲಿಲ್ಲ, ಜನವಸತಿ ಇಲ್ಲದ ಕಡೆ ಕಾಮಗಾರಿ ನಡೆಸಿ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮನೋಹರ್ ನನ್ನ ಮನೆಯಲ್ಲಿಯೆ ಅಳವಡಿಸಲಾದ ಮೀಟರ್ ಕಳಪೆ ಗುಣಮಟ್ಟದ್ದಾಗಿದೆ, ಕಾಮಗಾರಿ ಕೈಗೊಳ್ಳುವ ವೇಳೆ ಅನೇಕ ಲೋಪಗಳಾಗಿವೆ ಎಂದು ಆರೋಪಿಸಿದರು.1ನೇ ವಾರ್ಡ್ ಸದಸ್ಯೆ ಕವಿತಾ ರಾಜೇಶ್, ಸುಮ ಸುಬ್ಬಣ್ಣ, ಶಾಂತರಾಜು , ಜಿ.ಪಿ. ಶಿವಕುಮಾರ ಸೇರಿದಂತೆ ಹಲವರು ಕಾಮಗಾರಿ ಸಮರ್ಪಕ ರೀತಿ ಪೂರ್ಣಗೊಳಿಸಿಲ್ಲ, ನೇಮಿಸಲಾದ ತನಿಖಾ ಸಮಿತಿ ಸಮರ್ಪಕ ರೀತಿ ವರದಿ ನೀಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ ಕಾಮಗಾರಿಯ ಲೋಪ ಸರಿಯಾಗಬೇಕು, ಸದಸ್ಯರ ದೂರನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು. ಈ ವೇಳೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಕಮಿಟಿ ಅಧಿಕಾರಿಗಳನ್ನು ಪ್ರಶ್ನಿಸಿ ಇನ್ನು 1 ತಿಂಗಳೊಳಗೆ ಇಲ್ಲಿನ ಲೋಪ ಸರಿಯಾಗಬೇಕು, ವಾಲ್ ಸರಿ ಇಲ್ಲ, ಮೀಟರ್ ಸರಿ ಇಲ್ಲ ಎಂಬಿತ್ಯಾದಿ ದೂರು ಬರಕೂಡದು, 1ತಿಂಗಳಲ್ಲಿ 31ವಾರ್ಡ್‌ಗಳ ಸದಸ್ಯರ ಜೊತೆ ಸಭೆ ನಡೆಸಿ ವಾರ್ಡ್‌ಗಳಿಗೆ ತೆರಳಿ ಎಲ್ಲೆಲ್ಲಿ ಲೋಪವಾಗಿದೆ ಅದನ್ನು ಸರಿಪಡಿಸಿ ವರದಿ ನೀಡಬೇಕು, ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.ಮೀಟರ್ ನಲ್ಲಿಗೆ ದರ ನಿಗದಿ: ಈಗಾಗಲೇ 31 ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಸಿದ್ದು ಮೀಟರ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು 8 ಸಾವಿರ ಲೀಟರ್‌ಗೆ 56 ರು. ಪಾವತಿಸಬೇಕು, ಇದಕ್ಕಿಂತ ಹೆಚ್ಚು ಬಳಸಿದರೆ 112ರು. ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕಾಮಗಾರಿಗೆ ಸಂಬಂಧ ಡಿಪಿಆರ್ ನಂತೆ ಪರಿಶೀಲಿಸಿ ಅಧಿಕಾರಿಗಳು ದೂರು ಬರದಂತೆ ಕಾಮಗಾರಿ ನಿರ್ವಹಿಸಬೇಕು, ಎಲ್ಲಿ ಮೀಟರ್ ಅಳವಡಿಸಿಲ್ಲ ಪರಿಶೀಲಿಸಿ, ಹೊಸ ಸಂಪರ್ಕಕ್ಕೆ ಮುಂದಾಗಬೇಕು, ನಗರಸಭೆಗೆ ಆದಾಯ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಸಭೆಯಲ್ಲಿ ಸೂಚಿಸಲಾಯಿತು.
ಮಳಿಗೆಗಳ ಬಾಕಿ 15 ದಿನದಲ್ಲಿ ವಸೂಲಿಯಾಗಬೇಕು:ನಗರಸಭೆ ವ್ಯಾಪ್ತಿಗೊಳಪಡುವ ಮಳಿಗೆಗಳ ಬಾಡಿಗೆಯ ಬಾಕಿ 15 ದಿನದೊಳಗೆ ವಸೂಲಿ ಮಾಡಿ, ಅಂಗಡಿ ಮಾಲೀಕರು ತಡೆಯಾಜ್ಞೆ ಇದ್ದಾಗಲೂ ಬಾಡಿಗೆ ಪಡೆಯಲು ಅಡ್ಡಿ ಇಲ್ಲ, ಮೂಲ ಬಾಡಿಗೆದಾರರಿಂದಲೇ ವಸೂಲಿ ಮಾಡಿ, ಮೂಲ ಬಾಡಿಗೆದಾರರು ಅಂತಹ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿಲ್ಲ ಎಂದಾದರೆ ದಾಖಲೆ ಸಮೇತ ಭೇಟಿ ನೀಡಿ ಅಂತಹ ಮಳಿಗೆಗಳನ್ನು ತಕ್ಷಣ ನಗರಸಭೆ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ನೈಜ ವರದಿ ನೀಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಡೀಸಿ ಖಡಕ್ ಸೂಚನೆ ನೀಡಿದರು.ಕಾಮಗಾರಿಯನ್ನು ಟೆಂಡರ್ ಪಡೆದ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಕಾಮಗಾರಿ ಪೂರ್ಣಗೊಳಿಸಲು ವಿಳಂಬ ನೀತಿ ಅನುಸರಿಸಿದರೆ ಅಂತಹ ಗುತ್ತಿಗೆದಾರರಿಗೆ ತಕ್ಷಣವೇ ಮೂರು ನೋಟೀಸ್ ಜಾರಿಗೊಳಿಸಬೇಕು, ಆತ ನ್ಯಾಯಾಲಯದ ಹಂತಕ್ಕೆ ತೆರಳಲು ಬಿಡದೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕು. ಇಲ್ಲದ ಪಕ್ಷದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು, ಅದನ್ನ ಬಿಟ್ಟು ಗುತ್ತಿಗೆದಾರರನ್ನು ಗೋಗರೆಯುವ ಕ್ರಮ ಸರಿಯಲ್ಲ, ಈ ಬಗ್ಗೆ ನಗರಸಭಾಧಿಕಾರಿಗಳು ನಿಗಾ ವಹಿಸಬೇಕು, 21ವಾರ್ಡ್‌ಗಳ ಬಳಕೆಗಾಗಿ ಸರ್ಕಾರ ಬಿಡುಗಡೆ ಮಾಡಲಾಗಿರುವ ತಲಾ 10 ಲಕ್ಷ ಅನುದಾನವನ್ನು (2.10ಕೋಟಿ) ನಗರಸಭೆಯೇ ಸಮರ್ಪಕ ಕಾಮಗಾರಿ ನಿರ್ವಹಿಸುವ ಮೂಲಕ ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕ್ರಿಯಾಯೋಜನೆ ತಯಾರಿಸಲಾದ ಕಾಮಗಾರಿಗಳಿಗೆ ಟೆಂಡರ್ ವಿಲೇ ಮಾಡುವುದು ಸರಿಯಲ್ಲ, ನಾಳೆಯೊಳಗೆ ಯಾವುದೆ ಕಾಮಗಾರಿ ಟೆಂಡರ್ ಹಂತ ಬಾಕಿ ಇರಕೂಡದು, ಕೇವಲ 2ರಿಂದ 3ಲಕ್ಷ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ವಿಳಂಬ, ಮತ್ತೆ ಮರು ಟೆಂಡರ್, ಬಳಿಕ ಗುತ್ತಿಗೆದಾರರಿಂದ ವಿಳಂಬ ಹೀಗೆ ನಾನಾ ಕಾರಣಗಳಿಗಾಗಿ ಈ ಕಾಮಗಾರಿ ವರ್ಷವಾದರೂ ಪೂರ್ಣಗೊಳ್ಳಲ್ಲ, ಮುಂದೆ ಇಂತಹ ಬೆಳವಣಿಗೆ ನಡೆಯಬಾರದು, ನಗರಸಭಾಧಿಕಾರಿಗಳು ತಕ್ಷಣ ಟೆಂಡರ್ ಕರೆಯಬೇಕು, ಪ್ರಾರಂಭಕ್ಕೆ ಆದೇಶ ನೀಡಿ 2ರಿಂದ 3ತಿಂಗಳೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಬಸ್ತಿಪುರ ಬಳಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾಗದ ಸಮಸ್ಯೆಯನ್ನು ಬಗೆಹರಿಸಿ ಎಂದರು.ಇಲ್ಲಿಗೆ ಅಫೀಸರ್ಸ್ ಬರಲು ಹೆದರುತ್ತಾರೆ: ಕೊಳ್ಳೇಗಾಲಕ್ಕೆ ಹೊರಗಡೆಯಿಂದ ಆಫೀಸರ್ಸ್ ಬರಲು ಹೆದರುತ್ತಾರೆ, ಅಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ನಗರಸಭೆಯಲ್ಲಿ ಖಾಲಿ ಹುದ್ದೆಗೆ ಅಧಿಕಾರಿಗಳನ್ನು ನಿಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಶಾಸಕರು ಇಲ್ಲಿಗೆ ಬರಲು ಹೆದರುತ್ತಾರೆ ಎಂದರು. ನಗರಸಭೆ ಸದಸ್ಯ ಮಂಜುನಾಥ್ ನಮ್ಮ ನಗರಸಭೆಯಲ್ಲಿರುವ ಅಧಿಕಾರಿಗಳೇ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಯಾವ ರೀತಿ ಮಾಹಿತಿ ಕೇಳಬೇಕು, ಯಾವ ಕಡತ ಕೇಳಬೇಕು ಎಂಬಿತ್ಯಾಧಿ ಮಾಹಿತಿ ನೀಡಿ ಅವರೇ ಖುದ್ದು ನಿಂತು ಅರ್ಜಿ ಹಾಕಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ಕೆಲ ನಗರಸಭೆ ಸಿಬ್ಬಂದಿಗಳ ವರ್ತನೆ ವಿರುದ್ದ ದೂರಿದರು.ಬೀದಿ ನಾಯಿಗಳ ಸಮಸ್ಯೆ ಚರ್ಚೆ,
ನಗೆಗಡಲಲ್ಲಿ ತೇಲಿದ ಶಾಸಕ, ಸದಸ್ಯರುಕೊಳ್ಳೇಗಾಲ ಪಟ್ಟಣದ 31ವಾರ್ಡ್‌ಗಳಲ್ಲಿನ ಬೀದಿ ನಾಯಿ ಹಿಡಿದು ಸಂತಾನ ಹರಣ ಮಾಡುವ ಸಂಬಂಧ ನಡೆಸಲಾದ ಚರ್ಚೆ ವೇಳೆ ಕೆಲ ಸದಸ್ಯರು ಮಾತನಾಡಿದ ರೀತಿ, ನಾಯಿಗಳ ಹಾವಳಿ ಹೆಚ್ಚಳಕ್ಕೆ ನೀಡಿದ ಕಾರಣ ಗಮನಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಕೆಲವು ಸದಸ್ಯರು ನಗೆಗಡಲಲ್ಲಿ ತೇಲುವಂತೆ ಮಾಡಿತು. 1 ನಾಯಿ ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಿ ಬಳಿಕ ಅದೇ ಸ್ಥಳಕ್ಕೆ ನಾಯಿಯನ್ನು ಬಿಡುವುದಕ್ಕೆ 1451ರು. ಗಳನ್ನು ನೀಡಲಾಗುತ್ತೆ, 2001ನೇ ಇಸವಿಯ ಪ್ರಕಾರ ಪಟ್ಟಣದಲ್ಲಿ ನಾಯಿಗಳ ಸಂಖ್ಯೆ 521ಇದೆ ಎಂದು ಪರಿಸರ ಎಂಜಿನಿಯರ್ ಪ್ರಸನ್ನ ಮಾಹಿತಿ ನೀಡಿದರು. 23 ವರ್ಷದ ಬಳಿಕ ಗಣತಿ ಆಗಿಲ್ಲವೇ ಎಂದು ಶಾಸಕರು ಪ್ರಶ್ನಿಸಿದರು. ಆರ್‌ಎಂಸಿ ಭಾಗದುದ್ದಕ್ಕೂ ಮುಖ್ಯರಸ್ತೆಯಲ್ಲಿ ಲೆಕ್ಕ ಹಾಕಿ ಸಾಗಿದರೆ ಈ ಸಂಖ್ಯೆ ಸಿಗುತ್ತೆ ಎಂದು ಕೆಲ ಸದಸ್ಯರು ಅಧಿಕಾರಿ ಗಣತಿ ಮಾಹಿತಿಗೆ ನಕ್ಕರು. ಡಿಸಿ ನಾಯಿ ಹಾವಳಿ ನಿಯಂತ್ರಣಕ್ಕೆ ಕೇವಲ ಮಾತನಾಡಿದರೆ ಸಾಲದು ಕೆಲಸಮಾಡಿ, ತಕ್ಷಣ ಟೆಂಡರ್ ಕರೆಯಿರಿ ಎಂದು ತಾಕೀತು ಮಾಡಿದರು. ವಾಚ್ ಮೆನ್ ಶೆಡ್ಡ್ ನಿರ್ಮಾಣಕ್ಕೆ35 ಲಕ್ಷ: ಶಾಸಕರು ಗರಂ ವಾಚ್ ಮೆನ್ ಶೆಡ್ ನಿರ್ಮಾಣಕ್ಕೆ 35 ಲಕ್ಷ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಇದು ಎಷ್ಚು ಸರಿ ಎಂದು ಅಧಿಕಾರಿಗಳ ವರ್ತನೆಗೆ ಶಾಸಕರು ಕಿಡಿಕಾರಿದರು. ಅನಧಿಕೃತವಾಗಿ ಕಟ್ಟಡ ನಿರ್ಮಾಣವಾದರೂ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ, ಚಿತ್ರ ಮಂದಿರಗಳ ತೆರಿಗೆ ಲಕ್ಷಾಂತರ ಬಾಕಿ ವಸೂಲಾತಿ ಆಗುತ್ತಿಲ್ಲ ಎಂಬ ಜಯಮೇರಿ ಆರೋಪಕ್ಕೆ ಶಾಸಕ ಸಂಬಂಧಪಟ್ಟ ಅಧಿಕಾರಿಗಳು ತರಾಟೆ ತೆಗೆದುಕೊಂಡು. 2024, 25ರಲ್ಲಿ 3.32 ಕೋಟಿ ವಸೂಲಾತಿ ಗುರಿ ಇದ್ದು ಕೇವಲ,2.11ಕೋಟಿ ವಸೂಲಾತಿಯಾಗಿದ್ದು 1ತಿಂಗಳಲ್ಲಿ ಗುರಿ ಸಾಧಿಸಬೇಕು, ಇಲ್ಲದ ಪಕ್ಷದಲ್ಲಿ ಅಧಿಕಾರಿಗಳ ಲೋಪ ಖಂಡಿಸಿ ವಂಚನೆ ಪ್ರಕರಣ ದಾಖಲಿಸಲು ಕ್ರಮವಹಿಸಲಾಗುವುದು ಎಂದರು.