೩೭೧ಜೆ ವಿಶೇಷ ಸೌಲಭ್ಯ ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿ ನೀಡುವಾಗ ಜೇಷ್ಠತೆಯಲ್ಲಿ ಹಿರಿಯರಿದ್ದರೂ ಪದೋನ್ನತಿಯಿಂದ ವಂಚಿತ
ಕೊಪ್ಪಳ: ಸಂವಿಧಾನದ ವಿಶೇಷ ಸ್ಥಾನಮಾನ ಸಿಕ್ಕರೂ ಇನ್ನು ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರ ಬಡ್ತಿಯಲ್ಲಿ ಅನ್ಯಾಯವಾಗುತ್ತಿದ್ದು, ಸರಿಪಡಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಅನುಚ್ಛೇದ ೩೭೧ ಜೆ ಅಡಿಯಲ್ಲಿ ವಿಶೇಷ ಸೌಲಭ್ಯ ಒದಗಿಸಲಾಗಿದ್ದು, ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭಾನುವಾರ ನಗರದ ಪರಿವೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.೩೭೧ಜೆ ವಿಶೇಷ ಸೌಲಭ್ಯ ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿ ನೀಡುವಾಗ ಜೇಷ್ಠತೆಯಲ್ಲಿ ಹಿರಿಯರಿದ್ದರೂ ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ ಹಾಗೂ ಜೇಷ್ಠತೆಯಲ್ಲಿ ಕಿರಿಯರಿದ್ದರೂ ಕಲ್ಯಾಣ ಕರ್ನಾಟಕ ಹೊರತುಪಡಿಸಿದ ನೌಕರರಿಗೆ ಪದೋನ್ನತಿ ನೀಡಲಾಗುತ್ತಿದ್ದು, ಹಿರಿಯ ನೌಕರರು ಕಿರಿಯ ನೌಕರರ ಕೆಳಗಡೆ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಉಂಟಾಗುತ್ತಿದ್ದು, ೩೭೧ ಜೆ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು.
ಈ ಕುರಿತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು, ಪದೋನ್ನತಿ ವಂಚಿತ ನೌಕರರು ಸವಿಸ್ತಾರವಾಗಿ ವಿಷಯ ಸಭೆಯಲ್ಲಿ ಮಂಡಿಸಿದರು. ಸಭೆಯು ಸುಧೀರ್ಘವಾಗಿ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು.ಜನವರಿ ೨೦೨೬ರಲ್ಲಿ ರಾಯಚೂರಿನಲ್ಲಿ ಮುಂದಿನ ಸಭೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಬೀದರ ಜಿಲ್ಲಾಧ್ಯಕ್ಷ ಸೋಮಶೇಖರ ಚಿದ್ರಿ, ರಾಯಚೂರು ಜಿಲ್ಲಾಧ್ಯಕ್ಷ ಕೃಷ್ಣ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಎ.ಆಸೀಫ್, ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ, ಕಲಬುರ್ಗಿ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಯಾದಗಿರಿ ಪದಾಧಿಕಾರಿ ರಾಜಶೇಖರಗೌಡ, ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ನಿಜಲಿಂಗಪ್ಪ ಕೊರ್ಲಳ್ಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯ ಮಹಮ್ಮದ ಆಸೀಪ್‌ಅಲಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.